ಮಡಿಕೇರಿ, ಸೆ. 28: ಆನ್‍ಲೈನ್ ಮೂಲಕ ಔಷಧ ಮಾರಾಟ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಲು ಮುಂದಾಗಿರುವದನ್ನು ವಿರೋಧಿಸಿ ಇಂದು ದೇಶ ವ್ಯಾಪಿ ಕರೆ ನೀಡಲಾಗಿದ್ದ ಔಷಧ ಮಾರಾಟ ಬಂದ್ ಪ್ರತಿಭಟನೆಗೆ ಕೊಡಗು ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ 120 ಔಷಧ ಅಂಗಡಿಗಳಿದ್ದು, ಅಖಿಲ ಭಾರತ ಸಂಘದ ಬಂದ್ ಕರೆಗೆ ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವೂ ಬೆಂಬಲ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಮಳಿಗೆಗಳು ಇಂದು ಮುಚ್ಚಲ್ಪಟ್ಟಿದ್ದವು. ಆಸ್ಪತ್ರೆಯಲ್ಲಿ ತುರ್ತು ಸೇವೆಗಳಿಗೆ ಔಷಧಿ ನೀಡಲು ಕ್ರಮ ಕೈಗೊಂಡಿರುವದು ಹೊರತುಪಡಿಸಿದರೆ, ಜಿಲ್ಲೆಯಾದ್ಯಂತ ಅಂಗಡಿಗಳನ್ನು ಮುಚ್ಚಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಇ-ಈ ಸಂದರ್ಭ ಜಿಲ್ಲಾ ಸಂಘದ ಖಜಾಂಚಿ ಪ್ರಸಾದ್ ಗೌಡ, ಸದಸ್ಯರುಗಳಾದ ವಸಂತಕುಮಾರ್, ತಿಲಕ್, ಸುಬ್ಬರಾವ್, ಸತೀಶ್ ಭಟ್, ಕಿರಣ್, ಹಿರಿಯ ಸದಸ್ಯ ಅಂಬೆಕಲ್ ಕುಶಾಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಸಿದ್ದಾಪುರ: ರಾಜ್ಯಾದ್ಯಂತ ಔಷಧಿ ಅಂಗಡಿಗಳು ನಡೆಸಿದ ಮುಷ್ಕರಕ್ಕೆ ಸಿದ್ದಾಪುರದಲ್ಲಿ ಔಷಧಿ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದರು. ಸಿದ್ದಾಪುರ ವ್ಯಾಪ್ತಿಯ ಎಲ್ಲಾ ಔಷಧಿ ಅಂಗಡಿಗಳು ಮುಚ್ಚಿದ್ದರು. ಇದರಿಂದಾಗಿ ರೋಗಿಗಳು ಔಷಧಿಗಳನ್ನು ಖರೀದಿಸಲು ಪರದಾಡಿದ ದೃಶ್ಯ ಕಂಡು ಬಂದಿತು.

ಒಡೆಯನಪುರ: ಕೇಂದ್ರ ಸರಕಾರ ಆನ್‍ಲೈನ್‍ನಲ್ಲಿ ಔಷಧಿ ಮಾರಾಟಕ್ಕೆ ಅವಕಾಶ ನೀಡಿರುವದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆ ದೇಶಾದ್ಯಂತ ಔಷಧಿ ಮಾರಾಟ ಅಂಗಡಿಗಳನ್ನು ಮುಚ್ಚಿ ಬಂದ್ ನಡೆಸುವಂತೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರಸಂತೆ ಪಟ್ಟಣದಲ್ಲಿರುವ ಒಟ್ಟು 7 ಔಷಧಿ ಮಾರಾಟ ಅಂಗಡಿಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಸರಕಾರ ರೋಗಿಗಳ ಹಿತದೃಷ್ಟಿಯಿಂದ ಸರಕಾರಿ ಆಸ್ಪತ್ರೆ ಸಮಿಪದ ಇರುವ ಔಷಧಿ ಅಂಗಡಿಗಳು ಬಂದ್ ಮಾಡದಂತೆ ಆದೇಶ ನೀಡಿದ್ದರೂ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ಇರುವ ಔಷಧಿ ಅಂಗಡಿಯೊಂದನ್ನು ಕೂಡ ಮುಚ್ಚಲಾಗಿತ್ತು. ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಎಂದಿನಂತೆ ರೋಗಿಗಳು ಚಿಕಿತ್ಸೆಗೆ ಬಂದಿದ್ದರು. ರೋಗಿಗಳಿಗೆ ಆಸ್ಪತ್ರೆಯಲ್ಲಿ ಲಭ್ಯ ಇದ್ದ ಔಷಧಿ, ಮಾತ್ರೆಗಳನ್ನು ನೀಡಲಾಗುತ್ತಿತ್ತು, ಆದರೆ ಕೆಲವು ಔಷಧಿ, ಮಾತ್ರೆಗಳು ಔಷಧಿ ಮಾರಾಟ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಈ ಹಿನ್ನೆಲೆಯಲ್ಲಿ ವೈದ್ಯರು ಬರೆದು ಕೊಟ್ಟ ಔಷಧಿ, ಮಾತ್ರೆಯನ್ನು ಕೊಳ್ಳಲು ಔಷಧಿ ಅಂಗಡಿಗಳು ಬಂದ್ ಆಗಿದ್ದರಿಂದ ರೋಗಿಗಳು ಪರದಾಡುತ್ತಿದ್ದರು. ಔಷಧಿ ಅಂಗಡಿ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಕ್ಲಿನಿಕ್‍ಗಳಲ್ಲಿ ರೋಗಿಗಳ ಸಂಖ್ಯೆ ಇಳಿಮುಖ ವಾಗಿತ್ತು. ಆಲೂರುಸಿದ್ದಾಪುರ, ಕೊಡ್ಲಿಪೇಟೆಯಲ್ಲೂ ಔಷಧಿ ಮಾರಾಟ ಅಂಗಡಿಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದರು.