ಕೂಡಿಗೆ, ಸೆ. 27: ರೈತರು ಬೆಳೆದ ಸಾವಯವ ಉತ್ಪನ್ನ ಮತ್ತು ಅವುಗಳಿಂದ ತಯಾರಾಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕೊಡಗು-ಹಾಸನ ಸಾವಯವ ಕೃಷಿ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಜಯಪ್ರಸಾದ್ ಹೇಳಿದರು.

ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಕೇಂದ್ರದ ಆವರಣದಲ್ಲಿ ನಡೆದ ನಾಡಿಮಿಡಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸಾವಯವ ಗೊಬ್ಬರವನ್ನು ತಮ್ಮ ಜಮೀನಲ್ಲಿ ಹೆಚ್ಚಾಗಿ ಬಳಕೆ ಮಾಡಿ ಉತ್ತಮ ಬೆಳೆಯನ್ನು ಬೆಳೆಯಬೇಕು. ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾವಯವ ಕೃಷಿ ಕ್ಷೇತ್ರಾಧಿಕಾರಿ ಲೋಕೇಶ್ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಬೇಸಾಯ ಮಾಡಲು ಬೇಕಾಗುವಷ್ಟು ಸಾವಯವ ಗೊಬ್ಬರವನ್ನು ಉತ್ಪಾದಿಸಿಕೊಳ್ಳಲು ಇಲಾಖೆಯ ವತಿಯಿಂದ ಹೆಚ್ಚಿನ ಸಹಕಾರ ನೀಡಲಾಗುವದು. ಅಲ್ಲದೆ, ಸಾವಯವ ಗೊಬ್ಬರದಿಂದ ಬೆಳೆದ ಬೆಳೆಯು ಉತ್ತಮ ಉತ್ಕøಷ್ಟ ಹಾಗೂ ತೂಕದಲ್ಲಿ ಹೆಚ್ಚು ಭಾರ ಬರುವದರಿಂದ ಆದಾಯಕ್ಕೆ ಪೂರಕವಾಗಿರುತ್ತದೆ ಎಂದರು.

ಸಾವಯವ ಕೃಷಿ ಕ್ಷೇತ್ರದ ಮೇಲ್ವಿಚಾರಕ ಪುಟ್ಟಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಾವಯವ ಕೃಷಿ ನಿರ್ದೇಶಕ ಕಪಿನಪ್ಪ ವಹಿಸಿದ್ದರು. ಈ ಸಂದರ್ಭ ಗ್ರಾಮಸ್ಥರು, ರೈತರು ಇದ್ದರು.