ಮಡಿಕೇರಿ, ಸೆ. 27: ಪ್ರಸಕ್ತ ಸಾಲಿನಲ್ಲಿ ‘ಸಮೃದ್ಧಿ ಯೋಜನೆಯಡಿ’ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹಧನ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ಸಮೃದ್ಧಿ ಎಂಬ ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಬೀದಿಬದಿ ಮಹಿಳಾ ವ್ಯಾಪಾರಿಗಳು ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆಯುವದನ್ನು ತಡೆಗಟ್ಟಿ ಶೋಷಣೆಯಿಂದ ಮುಕ್ತಗೊಳಿಸುವದು, ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ತಲಾ ರೂ. 10 ಸಾವಿರಗಳಂತೆ ಪ್ರೋತ್ಸಾಹಧನ ನೀಡಲಾಗುವದು. ಫಲಾನುಭವಿಗಳು 18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ಮತ್ತು ಬೆಂಗಳೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಬೃಹತ್ ಮಹಾನಗರ ಪಾಲಿಕೆಯಲ್ಲಿ ಬೀದಿಬದಿ ವ್ಯಾಪಾರಿ ಎಂದು ನೊಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಮತ್ತು ಬಿ.ಪಿಎಲ್. ಕಾರ್ಡ್ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು. ಒಬ್ಬ ಫಲಾನುಭವಿ ಕೇವಲ ಒಂದು ಬಾರಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿ ಪಡೆಯಲು ಅಕ್ಟೋಬರ್ 1 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ) ಕೊಡಗು ಜಿಲ್ಲಾ ಘಟಕ, ಸುದರ್ಶನ್ ಅತಿಥಿ ಗೃಹದ ಹಿಂಭಾಗ, ಚೈನ್ಗೇಟ್ ಹತ್ತಿರ, ದೂ. 08272-298379, 7996368687 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.