ಸೋಮವಾರಪೇಟೆ, ಸೆ. 27: ನಿನ್ನೆ ಸುರಿದ ಧಾರಾಕಾರ ಮಳೆಗೆ ಈಗಷ್ಟೇ ದುರಸ್ತಿಗೊಂಡಿದ್ದ ಮಾದಾಪುರ-ಹಟ್ಟಿಹೊಳೆ-ಮಡಿಕೇರಿ ರಾಜ್ಯ ಹೆದ್ದಾರಿ ಕೆಸರುಮಯವಾಗಿದ್ದು, ವಾಹನಗಳ ಸಂಚಾರ ದುಸ್ತರವಾಯಿತು.

ಕಳೆದ 35 ದಿನಗಳಿಂದ ಬಂದ್ ಆಗಿದ್ದ ಈ ರಸ್ತೆಯನ್ನು ಹರಸಾಹಸ ಮಾಡಿ ದುರಸ್ತಿಗೊಳಿಸಿದ್ದು, ಸಮರೋಪಾದಿ ಕಾಮಗಾರಿಯ ಮೂಲಕ ಲಘು ವಾಹನಗಳ ಓಡಾಟಕ್ಕೆ ಕಳೆದ 4 ದಿನಗಳಿಂದ ಅನುವು ಮಾಡಿಕೊಡಲಾಗಿತ್ತು. ಹಟ್ಟಿಹೊಳೆಯಿಂದ 1 ಕಿ.ಮೀ. ಮುಂದಕ್ಕೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಚಿತ್ರಾ ಸುಬ್ಬಯ್ಯ ಅವರ ಮನೆಯಿದ್ದ ಸ್ಥಳದಲ್ಲಿ ರಸ್ತೆಗೆ ಲೋಡ್‍ಗಟ್ಟಲೆ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿತ್ತು.

ಆದರೆ ರಸ್ತೆಯ ಮೇಲೆ ಕಲ್ಲು, ಎಂ ಸ್ಯಾಂಡ್ ಹಾಕದೇ ಇದ್ದುದರಿಂದ ನಿನ್ನೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಲಘುವಾಹನಗಳ ಓಡಾಟಕ್ಕೆ ತೊಂದರೆಯಾಯಿತು. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಂಚರಿಸಲು ಸರ್ಕಸ್ ಮಾಡಬೇಕಾಯಿತು. ಈ ರಸ್ತೆಗೆ ತಕ್ಷಣ ಜಲ್ಲಿ ಕಲ್ಲು, ಎಂ.ಸ್ಯಾಂಡ್ ಹಾಕಿ ಸುಸ್ಥಿತಿಗೊಳಿ ಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕೆಂದು ವಾಹನ ಸವಾರರು ಆಗ್ರಹಿಸಿದರು.