ಕುಶಾಲನಗರ, ಸೆ. 27: ಶಿರಂಗಾಲ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು.
ಶಿರಂಗಾಲ ದೇವತಾ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯ ಸ್ವಯಂ ಸೇವಕರ ಪ್ರಮುಖ ಜವಾಬ್ದಾರಿಯಾಗಿದೆ. ಯುವ ಸಮೂಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಸೇವೆಯ ಮುಖ್ಯ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದರು. ಕಾಲೇಜು ಪ್ರಾಂಶುಪಾಲ ಹೆಚ್.ಜೆ. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಕೆ.ಎ. ವೀಣಾ, ಪೂಜಾ, ಎಸ್.ಆರ್. ವೆಂಕಟೇಶ್, ಕಾರ್ಯಕ್ರಮ ಅಧಿಕಾರಿ ಸಿ.ಎಸ್. ಹೇಮಲತಾ, ಹೆಚ್.ಆರ್. ಶಿವಕುಮಾರ್, ಕಾವ್ಯಶ್ರೀ, ಗಣೇಶ್ ಇದ್ದರು.