ಮಡಿಕೇರಿ, ಸೆ. 27: ಸಾಮಾಜಿಕ ಹೋರಾಟಗಾರ ಡಿ.ಎಸ್. ನಿರ್ವಾಣಪ್ಪ ಅವರನ್ನು ಬಂಧನಕ್ಕೆ ಒಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಬ್ಬರು ತಹಶೀಲ್ದಾರ್ ಹಾಗೂ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿಯನ್ನು ಅಮಾನತು ಗೊಳಿಸಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಬಿ.ಎಸ್. ನಿರ್ವಾಣಪ್ಪ, ಕುಶಾಲನಗರದ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೆÉೀಟೆ ತಹಶೀಲ್ದಾರ್ ಹಾಗೂ ತಮ್ಮನ್ನು ಬಂಧನಕ್ಕೆ ಒಳಪಡಿಸಿದ ಪ್ರಬಾರ ತಹಶೀಲ್ದಾರ್ ಮತ್ತು ಠಾಣಾಧಿಕಾರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ನಿರಾಶ್ರಿತರ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿರುವ ತಹಶೀಲ್ದಾರ್ ಮಹೇಶ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಸಮಿತಿಯ ಪ್ರಮುಖ ಅಮಿನ್ ಮೊಹಿಸಿನ್ ಮಾತನಾಡಿ, ನಿರಂತರ ಹೋರಾಟದಿಂದ ಮಾತ್ರ ದುರ್ಬಲರು ಹಾಗೂ ಜನ ಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವೆಂದರು.

94ಸಿ ಮತ್ತು 94ಸಿಸಿ ಯಡಿ ಅರ್ಜಿ ಸಲ್ಲಿಸಿದ ನಿವಾಸಿಗಳಿಗೆ ಹಕ್ಕುಪತ್ರ ನೀಡದೆ ತಪ್ಪು ಮಾಡಿರುವ ಅಧಿಕಾರಿಗಳು ಇದೀಗ ಮಳೆಹಾನಿ ನಿರಾಶ್ರಿತರ ಬಳಿ ಹಕ್ಕುಪತ್ರ ಇದ್ದರೆ ಮಾತ್ರ ಮನೆ ನೀಡುವದಾಗಿ ಹೇಳುತ್ತಿದ್ದಾರೆ. ಆದರೆ, ಸಂತ್ರಸ್ತರಲ್ಲಿ ಅಂದಾಜು 60 ಕುಟುಂಬಗಳು 94ಸಿ ಮತ್ತು 94ಸಿಸಿಯಡಿ ಅರ್ಜಿ ಸಲ್ಲಿಸಿದವರೇ ಆಗಿದ್ದು, ಅಧಿಕಾರಿಗಳು ಹಕ್ಕು ಪತ್ರ ನೀಡದೆ ಇರುವ ಕಾರಣಕ್ಕಾಗಿ ಇದೀಗ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಜಿಲ್ಲಾಡಳಿತ ಪರಿಹಾರ ನೀಡುವ ಸಂದರ್ಭ ಇವರುಗಳಿಗೂ ಸಮಾನ ಸೌಲಭ್ಯ ನೀಡಬೇಕೆಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ನಿರ್ವಾಣಪ್ಪ ಅವರ ವಾಕ್ ಸ್ವಾತಂತ್ರ್ಯಕ್ಕೆ ಧÀಕ್ಕೆ ತಂದಿರುವ ಅಧಿಕಾರಿಗಳ ಕ್ರಮ ಖಂಡನೀಯವೆಂದರು. ಬಹುಜನ ಕಾರ್ಮಿಕ ಸಂಘದ ಪ್ರಮುಖ ಮೊಣ್ಣಪ್ಪ ಮಾತನಾಡಿ, ನಿರ್ವಾಣಪ್ಪ ಅವರ ಬಂಧನಕ್ಕೆ ಕಾರಣಕರ್ತರಾದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಎಸ್.ಆರ್. ಮಂಜುನಾಥ್ ಹಾಗೂ ಹೆಚ್.ಸಿ.ಸಣ್ಣಪ್ಪ ಉಪಸ್ಥಿತರಿದ್ದರು.