ವೀರಾಜಪೇಟೆ, ಸೆ. 27: ವೀರಾಜಪೇಟೆ ತಾಲೂಕಿಗೆ ಮೂರನೇ ಹಂತದ ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿದ್ದು, ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರು ನಿಗಾವಹಿಸಿ ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕು. ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ನಗರೋತ್ಥಾನ ಯೋಜನೆಯಡಿ ಯಲ್ಲಿನ ಭಾಗ ಮೂರರಲ್ಲಿ ರೂ. 2 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಂಜರುಪೇಟೆಯಿಂದ ಗಣಪತಿ ಬೀದಿವರೆಗೆ ರೂ. 11 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಇತರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ ಕೆ.ಜಿ. ಬೋಪಯ್ಯ ಅವರು, ಪಟ್ಟಣದ ಜನತೆಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರೂ. 60 ಲಕ್ಷ, ಪ.ಜಾತಿ ಅಭಿವೃದ್ಧಿಗೆ ರೂ. 29.16 ಲಕ್ಷ, ಪ.ಪಂಗಡಗಳಿಗೆ ರೂ. 11.82 ಲಕ್ಷ, ಸೇರಿದಂತೆ ಒಟ್ಟು ರೂ. 1 ಕೋಟಿ 70 ಲಕ್ಷದಲ್ಲಿ ಸಾರ್ವಜನಿಕ ಆಸ್ಪತ್ರೆ ರಸ್ತೆ, ಬಂಗಾಳ ಬೀದಿ ರಸ್ತೆ, ನೆಹರು ನಗರ, ಗೌರಿಕೆರೆ ಮತ್ತು ಚಿಕ್ಕಪೇಟೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ತಕ್ಷಣದಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗುವದು. ಬೆಟ್ಟ ಪ್ರದೇಶವಾದ ಮಲೆತಿರಿಕೆ ಬೆಟ್ಟ, ಅರಸುನಗರ ಮತ್ತು ಇತರೆಡೆಗಳಲ್ಲಿ ಅಗತ್ಯವಿದ್ದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುವದು ಎಂದರು.
ಭೂಮಿಪೂಜೆ ಸಂದರ್ಭ ಜಿಲ್ಲಾ ಯೋಜನಾ ನಿರ್ದೇಶಕ ಗೋಪಾಲ ಕೃಷ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಎನ್.ಪಿ. ಹೇಮ್ ಕುಮಾರ್, ಪ.ಪಂ. ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಮಾಜಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಮಾಜಿ ಸದಸ್ಯರಾದ ಬಿ.ಡಿ. ಸುನಿತ, ಬಿ.ಎಂ. ಕುಮಾರ್, ಬಿ.ಜೆ.ಪಿ. ಸಮಿತಿಯ ಪಿ. ರಘು ನಾಣಯ್ಯ, ಸ್ಥಳೀಯರಾದ ನಿತಿನ್ ತಿಮ್ಮಯ್ಯ, ಉಣ್ಣಿಕೃಷ್ಣನ್, ಸುಮೇಶ್, ಹೇಮಂತ್ ಇತರರು ಉಪಸ್ಥಿತರಿದ್ದರು.