ಗೋಣಿಕೊಪ್ಪ, ಸೆ. 27 : ಕಾಫಿ ಬೆಳೆಯೊಂದಿಗೆ ಔಷದೀಯ ಗುಣಗಳುಳ್ಳ ಪಾರಂಪರಿಕ ಸಸ್ಯ ಕೃಷಿಯನ್ನು ಉಪಕಸುಬಾಗಿ ಬೆಳೆಯಲು ಕೊಡಗಿನ ಕೃಷಿಕರು ತೊಡಗಿಸಿಕೊಳ್ಳಬೇಕು. ಆ ಮೂಲಕ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಮಹಾರಾಜ್ ಸಲಹೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್, ಭಾರತೀಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ವಾಣಿಜ್ಯ ಕೃಷಿಯಾಗಿ ಔಷಧಿ ಸಸ್ಯಗಳು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ ಸಬಲೀಕರಣಕ್ಕೆ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಇದರ ನಡುವೆ ಪಾರಂಪರಿಕವಾಗಿ ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬರುತ್ತಿರುವ ಔಷಧೀಯ ಗುಣಗಳುಳ್ಳ ಸಸ್ಯಗಳ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪಾರಂಪಾರಿಕ ಗಿಡಗಳ ಅಭಿವೃದ್ಧಿಗೆ ಮುಂದಾಗುವ ಮೂಲಕ ಮಿಶ್ರಬೆಳೆಯಾಗಿ ಉಪ ಕಸುಬಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಬೌಗೋಳಿಕವಾಗಿ ಸಸ್ಯ ವೈವಿಧ್ಯತೆಯ ಜಿಲ್ಲೆಯಾಗಿರುವ ಕೊಡಗಿನಲ್ಲಿ ಸುಮಾರು 380 ಕ್ಕೂ ಅಧಿಕ ಆಯುರ್ವೇದ ಗುಣಗಳುಳ್ಳ ಸಸ್ಯಗಳನ್ನು ಗುರುತಿಸಲಾಗಿದೆ. ಇವುಗಳನ್ನು ಬೆಳೆಸುವ ಕೃಷಿಕರಿಗೆ ಮಾರುಕಟ್ಟೆಯ ಸೌಲಭ್ಯವಿಲ್ಲದ ಕಾರಣ ಜನಪ್ರಿಯಗೊಳ್ಳುತ್ತಿಲ್ಲ. ಔಷಧೀಯ ಗುಣಗಳುಳ್ಳ ಸಸ್ಯಗಳಿಂದ ಸಂಪನ್ಮೂಲಗಳನ್ನು ಖರೀದಿ ಮಾಡಲು ಕೃಷಿ ಸಂಘಗಳು ಮುಂದೆ ಬರಬೇಕು ಎಂದರು.

ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾರೈ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರೊಂದಿಗಿನ ಬಾಂಧವ್ಯ ಹೆಚ್ಚಾಗಿರುತ್ತಿತ್ತು. ಈ ಸಂದರ್ಭ ಔಷಧೀಯ ಗುಣಗಳುಳ್ಳ ಸಸ್ಯಗಳ ಪರಿಚಯವನ್ನು ಹಿರಿಯರು ಮಕ್ಕಳಿಗೆ ಮಾಡುತ್ತಿದ್ದರು. ಶಾರೀರಿಕವಾಗಿ ಒಂದಷ್ಟು ಔಷಧಿ ಕೂಡ ಮಕ್ಕಳಿಗೆ ದೊರಕುತ್ತಿತ್ತು. ಕಾಯಿಲೆಗಳಿಂದ ದೂರ ಉಳಿಯುವಂತಾಗಿತ್ತು. ಇದರಿಂದಾಗಿ ಔಷಧೀಯ ಸಸ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದರು.

ಮೈಸೂರು ಆಯುರ್ವೇದ ಮೆಡಿಕಲ್ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಸತ್ಯನಾರಾಯಣ ಭಟ್ ಮಾತನಾಡಿ, ಕೊಡಗಿನ ಹವಾಮಾನಕ್ಕೆ ಸೂಕ್ತವಾಗಿರುವ ಮನೆಯ ಹಿತ್ತಲಿನಲ್ಲಿರುವ ಔಷದೀಯ ಗುಣಗಳುಳ್ಳ ಗಿಡಗಳನ್ನೇ ಬೆಳೆಸುವ ಮೂಲಕ ಆರ್ಥಿಕವಾಗಿಯೂ ಬೆಳವಣಿಗೆಯಾಗಬಹುದು. ಕೊಡಗಿಗೆ ಸೂಕ್ತವಾದ ಔಷದೀಯ ಗುಣಗಳ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.

ಡಾ. ಎಸ್. ವೈದ್ಯನಾಥನ್ ಹಾಗೂ ಡಾ. ಸುವೈ ಅವರು ಬರೆದಿರುವ ಡಾ. ಸತ್ಯನಾರಾಯಣ ಭಟ್ ಅವರು ಕನ್ನಡಕ್ಕೆ ಆನುವಾದ ಮಾಡಿರುವ ‘ಕಾಯಿಲೆ ಇಲ್ಲದ ಹೃದಯ ರೋಗಿಗಳು’ ಎಂಬ ಪುಸ್ತಕವನ್ನು ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಬಿಡುಗಡೆಗೊಳಿಸಿದರು. ಆಯುರ್ವೇದ ಪಿತಾಮಹ ಪಿ.ಟಿ.ಕೆ. ನಂಬೀಶನ್ ಅವರು ಬರೆದಿರುವ ಬದುಕು-ಸಾಧನೆ-ಪರಿಸರ ಎಂಬ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್, ಹಿರಿಯ ಸ್ವಾಮೀಜಿ ಧರ್ಮಾತ್ಮ ನಂದಾಜಿ ಉಪಸ್ಥಿತರಿದ್ದರು.

ಪಾರಂಪಾರಿಕ ವೈದ್ಯ ಪರಿಷತ್ ಸಂಚಾಲಕಿ ಚಿತ್ರಾವತಿ, ಕೆವಿಕೆ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಟಿ. ಎಲ್. ಶ್ರೀನಿವಾಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

-ವರದಿ : ಸುದ್ದಿಪುತ್ರ,

ದಿನೇಶ್ ಎನ್.ಎನ್.