ಕುಶಾಲನಗರ, ಸೆ. 27: ಕುಶಾಲನಗರದ ಕಾರು ಚಾಲಕರ ಮತ್ತು ಮಾಲೀಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಡೆದ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಬಗ್ಗೆ ಲೆಕ್ಕ ಪರಿಶೋಧಕರ ವರದಿ ಸಿದ್ಧಗೊಂಡಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ಧರಿಸಲಾಗಿದೆ.
ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷ ಎಂ.ಎನ್. ಕರುಣಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಅವ್ಯವಹಾರದಲ್ಲಿ ಆರೋಪಿಗಳಾಗಿರುವ ಹಿಂದಿನ ಸಾಲಿನ ಅಧ್ಯಕ್ಷ ಹೆಚ್.ಎನ್. ರಾಮಚಂದ್ರ, ಕಾರ್ಯದರ್ಶಿ ರೋಹಿತ್ ಅವರುಗಳ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಹೂಡುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಎನ್. ಅಶೋಕ್ ತಿಳಿಸಿದ್ದಾರೆ.
ಸಭೆ ಆರಂಭವಾಗುತ್ತಿದ್ದಂತೆಯೇ ಸಂಘದ ಸ್ಥಾಪಕ ಅಧ್ಯಕ್ಷ ವಾಂಚಿರ ಮನು ನಂಜುಂಡ ಅವರು ಸಂಘದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಬಗ್ಗೆ ಮಾಹಿತಿ ನೀಡಬೇಕೆಂದು ಆಡಳಿತ ಮಂಡಳಿ ನಿರ್ದೇಶಕರನ್ನು ಪ್ರಶ್ನಿಸಿದಾಗ, ಈ ಹಿಂದಿನ ಅಧ್ಯಕ್ಷ ಹೆಚ್.ಎನ್. ರಾಮಚಂದ್ರ ಅವರ ಅವಧಿಯಲ್ಲಿ ರೂ. 1.13 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಲೆಕ್ಕಪರಿಶೋಧಕರ ವರದಿ ಬಂದಿರುವ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಸಂಘಕ್ಕೆ ಪಿಗ್ಮಿ ಹಣ, ಡೆಪಾಸಿಟ್ ಹಾಗೂ ಚಿನ್ನಾಭರಣ ಅಡವಿಟ್ಟ ಅಮಾಯಕರ ಹಣವನ್ನು ದುರುಪಯೋಗ ಪಡಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಾಪಕ ಅಧ್ಯಕ್ಷ ಮನುನಂಜುಂಡ ಸಭೆಯಲ್ಲಿ ಆಗ್ರಹ ವ್ಯಕ್ತಪಡಿಸಿದರು. ಸಂಘದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ದುರುಪಯೋಗ ಮಾಡಿದವರಿಂದ ಹಣವನ್ನು ಮರುಪಾವತಿ ಮಾಡಿಸಿ ಸಂಘವನ್ನು ಉಳಿಸಿ ಬೆಳೆಸಬೇಕಾದ ಕೆಲಸ ಮಾಡಬೇಕಾಗಿದೆ ಎಂದರು.
ಸಂಘವನ್ನು ಉಳಿಸಿ ಬೆಳೆಸುವ ಮಹದಾಸೆಯಿಂದ ಹೊಸ ಆಡಳಿತ ಮಂಡಳಿ ರಚಿಸಿಕೊಳ್ಳಲಾಗಿದೆ. ಸಾರ್ವಜನಿಕರ ಹಣವನ್ನು ಸ್ವಲ್ಪ ಕಾಲಾವಕಾಶದೊಂದಿಗೆ ಹಿಂತಿರುಗಿಸಲಾಗುವದು. ಬ್ಯಾಂಕ್ ಗ್ರಾಹಕರು ಆತಂಕ ಪಡಬಾರದು ಎಂದು ಉಪಾಧ್ಯಕ್ಷ ಅಶೋಕ್ ಈ ಸಂದರ್ಭ ಮನವಿ ಮಾಡಿದರು. ಸಂಘದ ಲೆಕ್ಕಪರಿಶೋಧಕರಾಗಿ ಇಲಾಖೆಯವರನ್ನೇ ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಬಿ.ಸಿ. ಮಲ್ಲಿಕಾರ್ಜುನ, ಕೆ.ಎ. ಉದಯ ಕುಮಾರ್, ಎ.ಯು. ಉಮ್ಮರ್, ಲೀಲಾಧರ್ ರೈ, ಎಲ್. ಸುರೇಶ್, ವ್ಯವಸ್ಥಾಪಕಿ ತಾಹಿರಾ ಇದ್ದರು.