ಕೂಡಿಗೆ, ಸೆ. 27: ಕೂಡಿಗೆಯ ಕಾರ್ಪೋರೇಷನ್ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಉಚಿತವಾಗಿ ಹೈನುಗಾರಿಕೆ ಬಗ್ಗೆ ರೈತರಿಗೆ ತರಬೇತಿಯನ್ನು ಕೇಂದ್ರ ಆವರಣದಲ್ಲಿ ನೀಡಲಾಯಿತು.

ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕರಾದ ಸುರೇಶ್ ನೆರವೇರಿಸಿ ನಂತರ ಮಾತನಾಡಿ, ನಿರುದ್ಯೋಗಿ ಯುವಕ, ಯುವತಿಯರು, ಸ್ವ ಉದ್ಯೋಗ ಕೈಗೊಳ್ಳಲು ಸಂಸ್ಥೆಯ ವತಿಯಿಂದ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ಇದರ ಪ್ರಯೋಜನ ಪಡೆದು ಬ್ಯಾಂಕ್‍ಗಳಿಂದ ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಸಂಸ್ಥೆಯು ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಳನ್ನು ನಡೆಸಲು ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ ಎಂದರು. ಪಶುಪಾಲನೆ ಇಲಾಖೆಯ ಡಾ. ಚಿಟ್ಟಿಯಪ್ಪ, ಅನಿತಾ, ನಾಗರಾಜು, ತೋಟಗಾರಿಕೆ ಇಲಾಖೆ ಅಧಿಕಾರಿ ಕಾವ್ಯ ಎರೆಹುಳುವಿನ ಬಗ್ಗೆ, ಹೈನುಗಾರಿಕೆ, ಹಸುಗಳನ್ನು ಕೊಟ್ಟಿಗೆಯಲ್ಲಿ ಪಾಲನೆಯ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಈ ಸಂದರ್ಭ ಕೇಂದ್ರದ ಅಧಿಕಾರಿ ಸಲಾವುದ್ದೀನ್, ಹರೀಶ್, ಲೋಕೇಶ್ ಸೇರಿದಂತೆ ರೈತರು ಇದ್ದರು.