ಮಡಿಕೇರಿ, ಸೆ. 27: ಅತಿವೃಷ್ಟಿ ಸಂತ್ರಸ್ತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಕನ್ನಡನಾಡು ಯುವ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅತಿವೃಷ್ಟಿ ಹಾನಿಯಿಂದ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಕೊಡಗಿನ ಸಂತ್ರಸ್ತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಸುವರ್ಣ ಕನ್ನಡನಾಡು ಯುವ ವೇದಿಕೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸುವರ್ಣ ಕನ್ನಡನಾಡು ಯುವ ವೇದಿಕೆಯ ಜಿಲ್ಲಾ ಉಸ್ತುವಾರಿ ಕೆ.ಪಿ. ಅಜಿತ್, ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ದುರಂತಗಳ ಬಗ್ಗೆ ದೃಶ್ಯ ಸಹಿತ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ತಲಪಿಸುವ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪ್ಯಾಕೇಜ್ ನೀಡುವಂತೆಯೂ ಆಗ್ರಹಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವದೇ ಸರಕಾರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದರು.

ಗಂಜಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ತುರ್ತಾಗಿ ಮನೆ ನಿರ್ಮಾಣ ಮಾಡಿಕೊಡಬೇಕು. ಕೊಡಗಿನ ರೈತರ ಬೆಳೆ ಸಾಲ ಹಾಗೂ ಮನೆ ಹಾನಿ ಪೀಡಿತರಿಗೆ ತಕ್ಷಣವೇ ಹಾನಿಗೆ ತಕ್ಕಂತೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಪ್ರಮುಖರು, ಮುಂದಿನ 15 ದಿನಗಳಲ್ಲಿ ಸೂಕ್ತ ಸ್ಪಂದನ ದೊರೆಯದೆ ಇದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವದಾಗಿ ಎಚ್ಚರಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸದಿದ್ದಲ್ಲಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುವದಾಗಿ ಹೇಳಿದರು.