ಕುಶಾಲನಗರ, ಸೆ. 27: ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧನೆಯ ಛಲ, ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ರಾಮ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಶ್ರೀ ರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಆಶ್ರಯದಲ್ಲಿ ಸ್ಥಳೀಯ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸಂಘಸಂಸ್ಥೆಗಳ ಸಹಕಾರದ ಅಗತ್ಯವಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಆಸ್ತಿಯಾಗಿ ಪರಿವರ್ತಿಸಬೇಕಿದೆ. ವಿದ್ಯಾರ್ಥಿಗಳು ತಮಗೆ ದೊರಕುವ ಪ್ರೋತ್ಸಾಹವನ್ನು ಸಾಧನೆಯಾಗಿ ಪರಿವರ್ತಿಸಿಕೊಳ್ಳುವ ಮೂಲಕ ಬದ್ಧತೆ ಪ್ರದರ್ಶಿಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷಣದ ಮೂಲಕ ಯುವ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯ. ವಿದ್ಯಾರ್ಥಿಗಳಿಗೆ ಸಮಾಜಮುಖಿ ಶಿಕ್ಷಣ ಒದಗಿಸುವದರೊಂದಿಗೆ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಲು ಪ್ರೇರೇಪಿಸಬೇಕು ಎಂದರು. ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ ಬಿ ಹೊಳ್ಳ ಮಾತನಾಡಿ, ಸ್ವಉದ್ಯೋಗ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವದು ತಮ್ಮ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. 5 ವರ್ಷಗಳ ಕಾಲ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದ್ದು ಸಾರಿಗೆ ಉದ್ಯಮ ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸ ಲಾಗುತ್ತಿದ್ದು ಕೊಡಗು ಜಿಲ್ಲೆಯಲ್ಲಿ 8 ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕದ ಸುಮಾರು 2000 ವಿದ್ಯಾರ್ಥಿಗಳಿಗೆ ಅಂದಾಜು ರೂ. 50 ಲಕ್ಷದಷ್ಟು ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದರು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್, ಸಂಸ್ಥೆಯ ಜನರಲ್ ಮ್ಯಾನೇಜರ್, ಶರತ್‍ಚಂದ್ರ ಭಟ್ ಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್, ಜಿಲ್ಲಾ ಪ್ರವಾಸಿ ವಾಹನ ಮಾಲೀಕರು ಚಾಲಕರ ಸಂಘದ ಅಧ್ಯಕ್ಷ ಕುಳಿಯಕಂಡ ಸಂಪತ್, ಸಂಸ್ಥೆಯ ರಾಜ್ಯ ಘಟಕದ ಪ್ರಮುಖರಾದ ನಂದಗೋಪಾಲ್ ವೇದಿಕೆಯಲ್ಲಿದ್ದರು.
ಸ್ಥಳೀಯ ಶಾಖಾ ಪ್ರಮುಖರು, ಮುಖ್ಯಸ್ಥರು, ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಇದ್ದರು.
ಇದೇ ಸಂದರ್ಭ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಬೆಂಗಳೂರಿನ ನಾರಾಯಣ ದಂಪತಿಗಳಿಂದ ಮ್ಯಾಜಿಕ್ ಶೋ, ಕೊಡವ ಸಾಂಸ್ಕøತಿಕ ನೃತ್ಯಗಳ ಪ್ರದರ್ಶನ ಜರುಗಿತು.