ಮಡಿಕೇರಿ, ಸೆ. 27: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮರ ಬೇಸಾಯ ಮತ್ತು ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಅವರಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲ ಶಿವಮೊಗ್ಗ 2018-19ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಡಾ. ರಾಮಕೃಷ್ಣ ಹೆಗಡೆ ಅವರು ಸುಮಾರು ಎರಡು ದಶಕಗಳಿಂದ ಅರಣ್ಯಶಾಸ್ತ್ರದಲ್ಲಿ ಶಿಕ್ಷಕರಾಗಿ, ಸಂಶೋಧಕರಾಗಿ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಸಹಯೋಗದಲ್ಲಿ ಅಖಿಲ ಭಾರತ ಸಂಘಟಿತ ಕೃಷಿ ಅರಣ್ಯ ಸಂಶೋಧನಾ ಯೋಜನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಹೆಗಡೆ ಅವರು ಹಲವಾರು ರೈತಪರ ವಿಷಯಗಳನ್ನು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಚರ್ಚಿಸಿದ್ದಾರೆ. ಅರಣ್ಯ ಮಹಾವಿದ್ಯಾಲಯದ ನರ್ಸರಿಯ ಮುಖ್ಯಸ್ಥರಾಗಿ ನರ್ಸರಿಯಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ಹಾಗೂ ಇತರರಿಗೆ ತಪಲಿಸಲು ನೆರವಾಗಿದ್ದಾರೆ. ಡಾ. ಹೆಗಡೆ ಅವರು ದೇಶ - ವಿದೇಶಗಳಲ್ಲಿ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.