ವೀರಾಜಪೇಟೆ, ಸೆ. 26: ಜನಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಿದ ಬಳಿಕ ಗ್ರಾಮಗಳ ಅಬಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸುವದು ಪಂಚಾಯಿತಿ ಸದಸ್ಯರ ಕರ್ತವ್ಯವಾಗಿದೆ. ಆದರೆ ಆರ್ಜಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವರ ಕರ್ತವ್ಯವನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಪಂಚಾಯಿತಿಯಲ್ಲಿ ಯಾವದೇ ಕೆಲಸವಾಗುತ್ತಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ ದೂರಿದರು.

ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್. ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಮಾಸಿಕ ಸಭೆಯಲ್ಲಿ ಮಾತನಾಡಿದ ಬಿ.ಎಂ. ರಮೇಶ್, ನಾನೊಬ್ಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾಗಿದ್ದು, ಯಾವದೇ ಮಾಹಿತಿ ನೀಡದೆ ಸಭೆಯಲ್ಲಿ ತೀರ್ಮಾನವಾಗದೆ ಸ.ನಂ.-64/10ರಲ್ಲಿ ನಿರ್ಮಿಸಿರುವ ಅನ್ವರುಲ್ ಹುದಾ ಸೆಂಟರ್ ಶಾಲಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಪೆರುಂಬಾಡಿ ಚೆಕ್ ಪೋಸ್ಟ್ ಬಳಿಯಿರುವ ಹೊಟೇಲ್‍ಗೂ ನಿರಾಪೇಕ್ಷಣಾ ಪ್ರಮಾಣ ಪತ್ರ ನೀಡಿರುವದು ಪಿಡಿಒ ಅವರ ವರ್ತನೆ ಸರಿಯಲ್ಲ. ಇದರ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿ ಯಿಂದ ತನಿಖಾ ವರದಿ ಬರುವ ತನಕ ತಾತ್ಕಲಿಕವಾಗಿ ತಡೆ ಹಿಡಿಯಬೇಕೆಂದು ಆಗ್ರಹಿಸಿದರು.

ಅಧ್ಯಕ್ಷೆ ಗಾಯಿತ್ರಿ ಅವರು ಮಾತನಾಡಿ, ನಿರಾಪೇಕ್ಷಣಾ ಪತ್ರ ನೀಡಲು ನಾನು ಹೇಳಿಲ್ಲ. ಪಿ.ಡಿ.ಓ. ನನಗೆ ಗೊತ್ತಿಲ್ಲದೆ ನನ್ನ ಸಹಿಯನ್ನು ಬಳಸಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಪಂಚಾಯಿತಿಯಲ್ಲಿ ಯಾವದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದರು. ಇದಕ್ಕೆ ಸದಸ್ಯ ಜಾಫರ್ ಸಾಧಿಕ್ ಅವರು ಮಾತನಾಡಿ, ಪಂಚಾಯಿತಿಯಲ್ಲಿ ಗ್ರಾಮಸ್ಥರುಗಳ ಅನೇಕ ಅರ್ಜಿಗಳು ಬಾಕಿ ಇದ್ದು ಇದರ ಬಗ್ಗೆ ಅಧ್ಯಕ್ಷರು ಗಮನ ಹರಿಸುತ್ತಿಲ್ಲ. ನಿರಾಪೇಕ್ಷಣಾ ಪತ್ರ ನೀಡಿರುವದನ್ನು ಪದೆ ಪದೆ ಚರ್ಚೆಮಾಡುತ್ತಿರಾ ಎಂದಾಗ, ಸದಸ್ಯ ಟಿ.ಎನ್. ಲವಕುಮಾರ್ ಮಾತನಾಡಿ, ಪಿಡಿಓ ಅವರು ನಿರಾಪೇಕ್ಷಣಾ ಪತ್ರ ನೀಡುವಾಗ ಸಭೆಯಲ್ಲಿ ತಿರ್ಮಾನಿಸದೆ ಏಕಪಕ್ಷೀಯವಾಗಿ ನೀಡಿರುವದು ಸರಿಯಲ್ಲ. ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಏನಾಯಿತು. ಇದರ ಬಗ್ಗೆ ಕೇಳಿದರೆ ಅಧಿಕಾರಿ ಮೌನ ವಹಿಸಿದ್ದಾರೆ. ಚುನಾವಣಾ ಸಂದರ್ಭ ಜನರಿಗೆ ನೀಡಿದ ಭರವಸೆಗಳು, ಭರವಸೆಯಾಗಿ ಉಳಿದಿವೆ ಎಂದು ಆರೋಪಿಸಿದರು.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ವಿದ್ಯಾಸಂಸ್ಥೆಗೂ ಮತ್ತು ಹೊಟೇಲ್‍ಗೂ ನಿರಾಪೇಕ್ಷಣಾ ಪತ್ರ ನೀಡಲು ಅಧ್ಯಕ್ಷರು ಗ್ರಾಮ ಪಂಚಾಯಿತಿ ಸಭೆಯಲ್ಲಿಯೇ ಹೇಳಿರುವದು ಅವರೇ ಸಹಿ ಮಾಡಿದ್ದಾರೆಂದು ಸಭೆಗೆ ತಿಳಿಸಿದರು. ಸದಸ್ಯ ಜಾಫರ್ ಸಾಧಿಕ್ ಮಾತನಾಡಿ, ಅಧ್ಯಕ್ಷರು ಸುಳ್ಳು ಹೇಳುವದನ್ನು ಬಿಟ್ಟು ಅಭಿವೃದ್ಧಿಕಡೆಗೆ ಗಮನ ಹರಿಸಿ ಎಂದರು. ಇದಕ್ಕೆ ಅಧ್ಯಕ್ಷೆ ಗಾಯಿತ್ರಿ ಮಾತನಾಡಿ, ನಾನು ಯಾವದೇ ಕಾರಣಕ್ಕೂ ನಿರಾಪೇಕ್ಷಣಾ ಪತ್ರ ನೀಡಲು ಹೇಳಿಲ್ಲ, ಸಹಿಯೂ ಮಾಡಿಲ್ಲ. ಇದು ಅಧಿಕಾರಿಯ ಕುತಂತ್ರ. ಇದರ ಬಗ್ಗೆ ತನಿಖೆಯಾಗಲಿ ಎಂದರು. ಇದಕ್ಕೆ ಸದಸ್ಯೆ ಶ್ರೀಜಾ ಜಯನ್ ಧ್ವನಿಗೂಡಿಸಿದರು.

ರಮೇಶ್ ಮಾತನಾಡಿ, ತಾ. 30.8.18ರ ಸಭೆಯನ್ನು ಬಹಿಷ್ಕರಿಸಲಾಗಿದೆ ಎಂದು ಬರೆದಿದ್ದಾರೆ. ಸಭೆಯನ್ನು ಯಾವ ಕಾರಣಕ್ಕಾಗಿ ಬಹಿಷ್ಕರಿಸಿದರು ಎಂಬದನ್ನು ನಮೂದಿಸಿಲ್ಲ. ಪಿ.ಡಿ.ಓ. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದರಲ್ಲದೆ, ಹಿಂದಿನ ಸಭೆಯಲ್ಲಿ ಚರ್ಚಿಸಲು ಸರಿಯಾದ ಮಾಹಿತಿ ಇಲ್ಲದ ಕಾರಣ ಸಭೆಯಿಂದ ಹೊರ ನಡೆಯಲಾಯಿತು. ಇಂದಿನ ಸಭೆಯಲ್ಲೂ ಯಾವದೇ ತೀರ್ಮಾನಗಳಿಲ್ಲ ಎಂದ ಬಿ.ಪಿ.ಎಲ್. ಪಡಿತರದಾರರಿಗೆ ಮನೆ ನಿರ್ಮಾಣ ಮಾಡಲು ಸರಕಾರದಿಂದ ಆದೇಶ ಬಂದಿದೆ ಇದನ್ನು ಜನರಿಗೆ ತಲಪಿಸುವಂತಹ ಕೆಲಸ ಆಗಬೇಕು ಎಂದು ಹೇಳಿದರು.

ಸಭೆಯಲ್ಲಿ ಸದಸ್ಯರಾದ ಹೆಚ್.ಬಿ. ಉದಯ ಕುಮಾರ್, ವೈ. ಗಂಗೂ, ಹೆಚ್.ಬಿ. ಪಾರ್ವತಿ, ಫಾತಿಮಾ ಅವರುಗಳು ಚರ್ಚೆಯಲ್ಲಿ ಭಾಗವಹಿಸಿ ದ್ದರು. ಸಭೆ ಪ್ರಾರಂಭದಿಂದಲೂ ಗದ್ದಲ ಗೊಂದಲಗಳು ಏರು ಧ್ವನಿಯಲ್ಲಿಯೇ ಚರ್ಚೆ ನಡೆಯಿತು. ಕೊನೆಗೆ ಸಭೆ ಯಾವದೇ ತೀರ್ಮಾನವಿಲ್ಲದೆ ನಿರ್ಣಯಗಳನ್ನು ಅಂಗೀಕರಿಸಿದೆ ಸಭೆ ಅಂತ್ಯಗೊಂಡಿತು.