ಮಡಿಕೇರಿ, ಸೆ. 26: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದಲ್ಲಿ ಸುಮಾರು 40 ರಿಂದ 60 ಮನೆಗಳು ಅಪಾಯದಲ್ಲಿದ್ದು, ವಾಸಕ್ಕೆ ಅಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉಡುವೆರ ಎಸ್. ಟಾಟ ಹಾಗೂ ಇತರರು, ಗರ್ವಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಶಿರಂಗಳ್ಳಿ ಗ್ರಾಮದಲ್ಲಿ ಸರಾಸರಿ 165 ಇಂಚಿನಷ್ಟು ಮಳೆಯಾಗಿರುವದು ದಾಖಲೆಯಾಗಿದ್ದರೆ, ಈ ಬಾರಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯಿಂದ ಈ ಪ್ರಮಾಣ ಸುಮಾರು 240 ಇಂಚುಗಳಷ್ಟಾಗಿದೆ. ಇದರಿಂದಾಗಿ ಗ್ರಾಮದ ಬೆಟ್ಟ ಗುಡ್ಡಗಳು ಸ್ಫೋಟಗೊಂಡು ಜಲ ಪ್ರಳಯ ಉಂಟಾಗಿ ಕಾಫಿ ತೋಟ, ಗದ್ದೆಗಳು ನಾಶವಾಗಿದೆ ಎಂದರು.

ಕಾಫಿ ಏಲಕ್ಕಿ, ಕರಿಮೆಣಸು, ಬಾಳೆ , ಕಿತ್ತಳೆ ಹಾಗೂ ಭತ್ತ ಸೇರಿದಂತೆ ಬಹುತೇಕ ಎಲ್ಲಾ ಕೃಷಿ ಸಂಪೂರ್ಣವಾಗಿ ಕೊಳೆತುಹೋಗಿ ಶೇ. 90 ರಷ್ಟು ಹಾನಿಯಾಗಿದೆ. ಮಹಾಮಳೆಗೆ ಗ್ರಾಮದ ಮೂರು ಭಾಗಗಳಲ್ಲಿರುವ ಬೆಟ್ಟಗಳು ಬಿರುಕು ಬಿಟ್ಟಿದ್ದು, ಯಾವದೇ ಸಂದರ್ಭದಲ್ಲಿ ಅಪಾಯ ಸಂಭವಿಸಬಹುದಾಗಿದೆ.

ಗ್ರಾಮದಲ್ಲಿ ಸುಮಾರು 80 ಕುಟುಂಬಗಳು ವಾಸವಿದ್ದು, ಬಹುತೇಕ ಮನೆಗಳು ಈ ಬೆಟ್ಟದ ತಪ್ಪಲಿನಲ್ಲಿವೆ. ಈಗಾಗಲೆ ಉಡುವೆರ ಬಿ. ಲೋಕೇಶ್ ಎಂಬವರಿಗೆ ಸೇರಿದ ಹೊಸ ಮನೆಯೊಂದು ಸಂಪೂರ್ಣ ನೆಲಸಮವಾಗಿದ್ದು, ಸುಮಾರು 15 ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಇದರಿಂದಾಗಿ ಗ್ರಾಮದಲ್ಲಿ ವಾಸಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಳೆಗಾಲದ ಅವಧಿಯಲ್ಲಿ ಕೋಟೆ ಬೆಟ್ಟದ ತಪ್ಪಲಿನಲ್ಲಿರುವ ಶಿರಂಗಳ್ಳಿ ಮತ್ತು ಕಿರುದಾಲೆ ಗ್ರಾಮದಲ್ಲಿ ನೆಲೆಸುವದು ಕಷ್ಟಸಾಧ್ಯವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಸಮೀಪದ ಗ್ರಾಮಗಳಲ್ಲಿ ಜಿಲ್ಲಾಡಳಿತ ಪರ್ಯಾಯ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಲ್ಲಿ ಅಲ್ಲಿಗೆ ತೆರಳಲು ಸಿದ್ಧರಿರುವದಾಗಿ ಗ್ರಾಮಸ್ಥರು ತಿಳಿಸಿದರು.

ಶಿರಂಗಳ್ಳಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಕಾಮಗಾರಿ ಕೈಗೆತ್ತಿಕೊಂಡಿರುವದು ಶ್ಲಾಘನೀಯ. ಆದರೆ, ಈ ಗ್ರಾಮಕ್ಕೆ ಬರುತ್ತಿದ್ದ ಬಸ್ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಲಘು ವಾಹನಗಳ ಸಂಚಾರಕ್ಕೆ ರಸ್ತೆ ಯೋಗ್ಯವಾಗಿದ್ದು, ಈ ರಸ್ತೆಯಲ್ಲಿ ಮಿನಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ಗ್ರಾಮಸ್ಥರಿಗೆ ಹಾಗೂ ಸೂರ್ಲಬ್ಬಿ ಯಲ್ಲಿರುವ ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೆ ಬರುವ ಸಿಬ್ಬಂದಿಗಳಿಗೂ ಅನುಕೂಲವಾಗಲಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಉಡುವೆರ ಭೀಮಯ್ಯ, ಸದಸ್ಯರುಗಳಾದ ಮೋಟನಾಳಿರ ಸನ್ನಿ ಕಾರ್ಯಪ್ಪ, ಸರ್ಕಂಡ ಗಣಪತಿ, ಮೊರ್ಕಂಡ ಸಚಿನ್ ಹಾಗೂ ಉದಿನಾಡಂಡ ನಾಣಿಯಪ್ಪ ಉಪಸ್ಥಿತರಿದ್ದರು.