ವೀರಾಜಪೇಟೆ, ಸೆ. 25: ಹಲವಾರು ಮೈಕ್ರೋ ಫ್ಯೆನಾನ್ಸ್ ಸಂಸ್ಥೆಗಳು ಖಾಸಗಿ ಲೇವಾದೇವಿ ಸಂಸ್ಥೆಗಳಾಗಿದ್ದು, ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆಯೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೂ ಕೂಡ ಮಾನವೀಯತೆ ಇಲ್ಲದ ಸಂಸ್ಥೆಗಳು ಸಾಲ ಕಟ್ಟಲಾಗದೆ ಸಂಕಷ್ಟದಲ್ಲಿರುವ ಬಡ ಜನರ ರಕ್ತ ಹೀರುತ್ತಿದ್ದಾರೆ ಎಂದು ಸಿ.ಪಿ.ಐ.ಎಂ.ನ ಡಾ ದುರ್ಗಾಪ್ರಸಾದ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಲುಗಿ ಹೋಗಿದೆ. ಪ್ರಕೃತಿ ವಿಕೋಪದಿಂದ ಜನರಿಗೆ ತೊಂದರೆ ಉಂಟಾಗಿದೆ. ಜಿಲ್ಲೆಯಲ್ಲಿರುವ ಬಹುತೇಕ ಕಡುಬಡವರು ಹಾಗೂ ಮಹಿಳೆಯರು ಸಾಲ ಪಡೆದಿದ್ದಾರೆ.

ಸಂಸ್ಥೆಗಳು ಸಾಲ ಮರು ಪಾವತಿ ಮಾಡುವಂತೆ ದುಂಬಾಲು ಬಿದ್ದ ಕಾರಣ ಈ ತನಕ 4 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮರು ಪಾವತಿಸಲು ರಾಜ್ಯ ಸರ್ಕಾರ ಮೂರು ತಿಂಗಳು ಕಾಲಾವಕಾಶ ನೀಡಿದೆ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ರಾಜ್ಯ ಸರ್ಕಾರದ ಆದೇಶ ಖಾಸಗಿ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನು ಲೆಕ್ಕಿಸದ ಖಾಸಗಿ ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಸಾಲಗಾರರಾದ ಸಂತೋಷ್, ವಿ.ವಿ. ಸುಶೀಲ, ಕೆ.ಹೆಚ್. ಶರೀಫ್ ಉಪಸ್ಥಿತರಿದ್ದರು.