ಮಡಿಕೇರಿ, ಸೆ. 25: ಕೊಡಗು ಜಿಲ್ಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಸಿಲುಕಿದ ಅನೇಕ ಬುಡಕಟ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸುವ ಮೂಲಕ ನೊಂದವರಿಗೆ ಅಗತ್ಯ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ.ಕೆ.ಗಣೇಶ್, ಬುಡಕಟ್ಟು ಜನರು ಅನುಭವಿಸುತ್ತಿರುವ ಕಷ್ಟ, ನಷ್ಟದ ಕುರಿತು ಮಾಹಿತಿ ನೀಡಿದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಚಿಕ್ಕನಹಳ್ಳಿ ರಾಮ್‍ಪುರ ತೋಟದಲ್ಲಿದ್ದ ಪಣಿ ಎರವರ ಕುಟುಂಬದ 8 ಮನೆಗಳಿಗೆ ನೀರುನುಗ್ಗಿ ಮನೆಯ ಸಾಮಗ್ರಿಗಳು, ಮೂಲ ದಾಖಲೆಗಳು, ವಿದ್ಯಾರ್ಥಿಗಳ ಸಮವಸ್ತ್ರ ಹಾಗೂ ಪುಸ್ತಕಗಳು ನೀರು ಪಾಲಾಗಿವೆ. ನಷ್ಟದ ಒಟ್ಟು ಹಾನಿ ಸುಮಾರು 50 ಸಾವಿರ ರೂ. ಗಳಿಗಿಂತ ಅಧಿಕವಾಗಿದೆ.

ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಎಡತೊರೆ ಕಾಲೋನಿಯಲ್ಲಿರುವ ಸುಮಾರು 3 ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟಿವೆ. ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಪೆರುಂಬಾಡಿಯಲ್ಲಿರುವ ಆದಿವಾಸಿಗಳು ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿ ಅಗತ್ಯವಾಗಿ ಶೌಚಾಲಯಗಳು ಮೊದಲು ನಿರ್ಮಾಣಗೊಳ್ಳಬೇಕಾಗಿದೆ ಎಂದು ತಿಳಿಸಿದ ಗಣೇಶ್, ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘ, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆ, ಪೈನಾನ್ಸ್ ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಕಷ್ಟು ಕಾಲವಕಾಶ ನೀಡಬೇಕಾಗಿದೆ. ಕನಿಷ್ಟ 6 ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡದಂತೆ ಸರಕಾರ ಸೂಚನೆ ನೀಡಬೇಕು. ಗೋಣಿಕೊಪ್ಪದ ಹಾತೂರು ಗ್ರಾಮದ ಸಂಸ್ಥೆಯೊಂದು ಬಲವಂತದ ಸಾಲ ವಸೂಲಾತಿಗೆ ಮುಂದಾಗಿದ್ದು, ಬಡ ಸಾಲಗಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿದೆ. ಇದರಿಂದ ಸಾಲ ಪಡೆದಿರುವ ಬುಡಕಟ್ಟು ಸಮುದಾಯ ಆತಂಕಗೊಂಡಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಣೇಶ್ ಒತ್ತಾಯಿಸಿದರು.

ಶ್ರೀಮಂಗಲ ಹೋಬಳಿ ಕೆ. ಬಾಡಗ ಗ್ರಾಮದ ಪಿ.ಎಂ. ತಮ್ಮು ಮಾತನಾಡಿ, ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯ ತಿರುನಾಡ ಹಾಡಿಯಲ್ಲಿ ಸುಮಾರು 27 ಪಂಜರಿಯರವ ಆದಿವಾಸಿ ಕುಟುಂಬಗಳು ವಾಸವಿದ್ದು, ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯ ಮಧ್ಯೆಯಿದ್ದ ಸೇತುವೆಯು ಕೊಚ್ಚಿ ಹೋಗಿರುವ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರಕಾರದಿಂದ 12 ಲಕ್ಷ ರೂ.ಗಳು ಮಂಜೂರಾಗಿದ್ದು, ಇದುವರೆಗೂ ಯಾವದೇ ರೀತಿಯ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲವೆಂದು ಆರೋಪಿಸಿದರು.

ಬಿ.ಶೆಟ್ಟಿಗೇರಿ ಪಂಚಾಯ್ತಿಯ ಕುಟ್ಟಂದಿ ಗ್ರಾಮದ ನಿವಾಸಿ ಮಣಿ ಮಾತನಾಡಿ ಗುಡ್ಡಮಾಡು ಪೈಸಾರಿಯಲ್ಲಿ ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡ 21 ಮನೆಗಳಿದ್ದು, ಇಲ್ಲಿಯವರೆಗೆ ಹಕ್ಕು ಪತ್ರವನ್ನು ನೀಡಿಲ್ಲ ಮತ್ತು ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದನ ದೊರೆಯುತ್ತಿಲ್ಲವೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕರಡಿಗೋಡು ಗ್ರಾಮದ ನಿವಾಸಿ ಕಾಕು, ಕುಟ್ಟಂದಿಯ ಲಲಿತ ಹಾಗೂ ತಿತಿಮತಿಯ ಅಶೋಕ ಉಪಸ್ಥಿತರಿದ್ದರು.