ಮಡಿಕೇರಿ, ಸೆ. 25: ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಕ್ರೀಡಾ ಜಿಲ್ಲೆ ಎಂದು ಹೆಸರು ಮಾಡಿರುವ ಕೊಡಗು ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ‘ಡಬ್ಬಲ್’ ಗೌರವ ದೊರೆತ ಹೆಮ್ಮೆ. ಕ್ರೀಡಾ ಸಾಧನೆಗಾಗಿ ಭಾರತ ಸರಕಾರದಿಂದ ನೀಡಲಾಗುವ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಗೆ ದೇಶದ ಟೆನ್ನಿಸ್ ತಾರೆ ಮೂಲತಃ ಕೊಡಗಿನ ಮಾದಾಪುರದವರಾದ ಮಚ್ಚಂಡ ರೋಹನ್ ಬೋಪಣ್ಣ ಭಾಗಿಯಾಗಿದ್ದು, ಇವರೊಂದಿಗೆ ಇದೇ ಪ್ರಪ್ರಥಮ ಬಾರಿಗೆ ಕ್ರೀಡಾ ತರಬೇತುದಾರರೊಬ್ಬರಿಗೆ ಈ ಸಾಧನೆಗಾಗಿ ನೀಡಲಾಗುವ ದ್ರೋಣಾಚಾರ್ಯ ಬಿರುದು ಲಭಿಸಿದೆ.
ಜಿಲ್ಲೆಯ ಕೋಕೇರಿಯವರಾದ ಪ್ರಸ್ತುತ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಚೇನಂಡ ಎ. ಕುಟ್ಟಪ್ಪ (ವಿಶು) ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದವರಾಗಿದ್ದು, ಇಂದು ನವದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಿಲ್ಲೆಯ ಕ್ರೀಡಾಪಟುಗಳು ಪಡೆಯುತ್ತಿರುವ 12ನೇ ಅರ್ಜುನ ಪ್ರಶಸ್ತಿ ಈ ಬಾರಿ ದೊರೆತಿದ್ದು, ಇದಕ್ಕೆ ಭಾಜನರಾಗಿರುವ ರೋಹನ್ ಬೋಪಣ್ಣ ಪ್ರಸ್ತುತ ಚೈನಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಈ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ.
ಸ್ವತಃ ಬಾಕ್ಸಿಂಗ್ ಪಟುವಾಗಿದ್ದ ಕುಟ್ಟಪ್ಪ 2009ರಿಂದ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶವನ್ನು ಪ್ರತಿನಿಧಿಸಿರುವ ಪ್ರತಿಷ್ಠಿತ ಬಾಕ್ಸಿಂಗ್ ಪಟುಗಳಿಗೆ ಅವರು ತರಬೇತುದಾರರಾಗಿದ್ದಾರೆ.
ಸಮಾರಂಭದಲ್ಲಿ ಕುಟ್ಟಪ್ಪ ಪತ್ನಿ ಅಶ್ವಿನಿ ಹಾಗೂ ಪುತ್ರಿ ಯುಧಿಯೊಂದಿಗೆ ಪಾಲ್ಗೊಂಡಿದ್ದರು. ಕುಟ್ಟಪ್ಪ ಮೂಲತಃ ಕೋಕೇರಿಯ ಚೇನಂಡ ದಿ. ಅಚ್ಚಯ್ಯ ಹಾಗೂ ಶಾಂತಿ ದಂಪತಿಯ ಪುತ್ರ.