ಮಡಿಕೇರಿ, ಸೆ. 25 : ಓಝೋನ್ ಪದರದ ರಕ್ಷಣೆ ನಮ್ಮೆಲ್ಲರ ಹೊಣೆ, ಮಾನವರಿಗೆ ಪರಿಸರ ಬಹಳ ಮುಖ್ಯ ಆದರೆ ಪರಿಸರಕ್ಕೆ ಮಾನವರು ಮುಖ್ಯವಲ್ಲ, ಇದನ್ನು ಅರಿತು ಪ್ರತಿಯೊಬ್ಬರು ಓಝೋನ್ ಪದರದ ರಕ್ಷಣೆಗೆ ಮುಂದಾಗಬೇಕೆಂದು ಮಡಿಕೇರಿಯ ಜೆ.ಎಂ.ಎಫ್.ಸಿ. ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ನುಡಿದರು.

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ಕ.ರಾ.ವಿ.ಪ.ಕೊಡಗು ಜಿಲ್ಲಾ ವಿಜ್ಞಾನ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇಕೋ ಕ್ಲಬ್, ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ವಿಶ್ವ ಓಝೋನ್ ಪದರ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಝೋನ್ ಪದರ ಹಾನಿಯಾದಲ್ಲಿ ಮಾನವರಿಗೆ ಹಾಗೂ ಸಕಲ ಜೀವಿಗಳಿಗೆ ತೊಂದರೆ ಉಂಟಾಗುವದು, ಆದ್ದರಿಂದ ಓಝೋನ್ ಪದರ ಸಂರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿರಬೇಕೆಂದರು.

ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮಾತನಾಡಿ, ಓಝೋನ್ ಪದರದ ಹಾನಿಯಿಂದ ನೇರಳಾತೀತ ನೀಲ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶಮಾಡಿ ಜೀವ ಸಂಕುಲಕ್ಕೆ ಹಾನಿ ಉಂಟುಮಾಡುತ್ತದೆ. ಹಾಗೂ ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ ಎಂದರು.

ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಮಿತಿಯ ಜಿಲ್ಲಾ ಸಂಯೋಜಕರಾದ ಟಿ.ಜಿ. ಪ್ರೇಮ್ ಕುಮಾರ್ ಅವರು ಮಾತನಾಡಿ ಪರಿಸರ ಸ್ನೇಹಿಯಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಪ್ರತಿಯೊಬ್ಬರೂ ಹೆಚ್ಚು ಹೆಚ್ಚ್ಚು ಗಿಡ-ಮರಗಳನ್ನು ಬೆಳೆಸಿ ಓಝೋನ್ ಪದರದ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೆಂಚಪ್ಪ ಪ್ರತಿಯೊಬ್ಬರಿಗೂ ಪರಿಸರ ಸಂರಕ್ಷಣೆ ಮಾಡುವದು ಅತಿ ಮುಖ್ಯ ಕರ್ತವ್ಯವಾಗಿದ್ದು, ಎಲ್ಲರೂ ಇದನ್ನು ಮನಗಂಡು ಪರಿಸರವನ್ನು ರಕ್ಷಿಸಿ ಓಝೋನ್ ಪದರದ ಸಂರಕ್ಷಣೆ ಮಾಡಬೇಕೆಂದು ಹೇಳಿದರು.

ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶ್ರೀನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಅವರುಗಳು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಓಝೋನ್ ಪದರ ರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಟಿ.ಜಿ. ಪ್ರೇಮ್ ಕುಮಾರ್ ಭೋದಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೆಂಚಪ್ಪ ಅವರು ಓಝೋನ್ ಪದರ ರಕ್ಷಣೆ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿದರು

ಕಾರ್ಯಕ್ರಮದಲ್ಲಿ ಓಝೋನ್ ಪದರ ರಕ್ಷಣೆ ಕುರಿತು ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್, ಉಪ ಪರಿಸರ ಅಧಿಕಾರಿ ಡಾ.ಎಂ.ಕೆ. ಸುಧಾ, ಸಹಾಯಕ ಪರಿಸರ ಅಧಿಕಾರಿ ಶ್ರುತಿ, ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಆಡಳಿತ ಅಧಿಕಾರಿ ಜೋಯಪ್ಪ ಇತರರು ಇದ್ದರು. ಉಪನ್ಯಾಸಕ ಎಸ್. ನಂದೀಶ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್. ಚಿದಾನಂದ ವಂದಿಸಿದರು.