ನಾಪೋಕ್ಲು, ಸೆ. 24: ಕೊಡಗಿನಲ್ಲಿ ಶೇಕಡ ಎಂಬತ್ತರಷ್ಟು ಪರಿಸರ ನಾಶವಾಗಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಜಿಲ್ಲೆಯ ಜನರು ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರವೇ ಕಾರಣ ಎಂದು ಕೆಲವು ಪರಿಸರವಾದಿಗಳು ಮಾಧ್ಯಮಗಳಲ್ಲಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಕ್ಕಬೆಯ ಸೇವ್ ಕೊಡಗು ವೇದಿಕೆ ಸಂಘಟನೆ ಆರೋಪಿಸಿದೆ. ಕೊಡಗಿನ ಬೆಳೆಗಾರರು ಯಾವ ರೀತಿ ಪರಿಸರದ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಈ ಪರಿಸರವಾದಿಗಳು ಉತ್ತರಿಸಲಿ ಎಂದು ವೇದಿಕೆ ಸವಾಲು ಎಸೆದಿದೆ.

ನಾಪೋಕ್ಲುವಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಕ್ಕಬೆ ಸೇವ್ ಕೊಡಗು ವೇದಿಕೆಯ ಸಂಚಾಲಕ ಬೊಳೆಯಾಡಿರ ಸಂತು ಸುಬ್ರಮಣಿ, ಕೊಡಗಿನ ಬೆಳೆಗಾರರು ಬೆಳೆ, ಬೆಲೆ ಕುಸಿತದಿಂದಾಗಿ ತಮ್ಮ ಜೀವನೋಪಾಯಕ್ಕೆ ಮನೆಯ ಪಕ್ಕದಲ್ಲಿ ಹೋಂಸ್ಟೇ ಮಾಡಿ ಜೀವನ ಮಾಡಲು ಪ್ರಾರಂಭಿಸಿದರು ಇದರಿಂದ ಪರಿಸರ ನಾಶವಾಗಿದೆಯೇ? ಎಂದು ಪ್ರಶ್ನಿಸಿದರು. ಮಾಧವ ಗಾಡ್ಗೀಳ್, ಡಾ. ಕಸ್ತೂರಿ ರಂಗನ್, ಸೂಕ್ಷ್ಮ ಪರಿಸರ ವಲಯ ಎಂಬ ವರದಿ ಅನುಸಾರವಾಗಿ ಕೊಡಗಿನ ಬೆಳೆಗಾರರು ಚಾಚೂ ತಪ್ಪದೇ ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಸಂತು ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗಿನ ಬಾಣೆ ಜಮೀನುಗಳು ಕೊಡಗಿನ ಮೂಲನಿವಾಸಿಗಳಿಗೆ ಹಾಲೇರಿ ರಾಜರಿಗಿಂತಲೂ ಹಿಂದೆಯೇ ಪರಂಪರಾಗತವಾಗಿ ಬಂದಿರುವಂತಹದ್ದು, ಬಾಣೆ ಜಮೀನುಗಳನ್ನು 2013ರ ರಾಷ್ಟ್ರಪತಿ ಅಂಕಿತ ಭೂಕಾಯ್ದೆ ತಿದ್ದುಪಡಿ ಅನುಸಾರ ಅನುಭವದಾರರಿಗೆ ಕಂದಾಯಕ್ಕೆ ಒಳಪಡಿಸಿ ಪರಾಧೀನ ಜಾಗವಾಗಿ ಮಾಡಿದರೆ ಬಾಣೆ ಜಮೀನಿನ ಸಮಸ್ಯೆ ಸಂಪೂರ್ಣ ಪರಿಹಾರವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಪರಿಸರವಾದಿಗಳು ಹಾಗೂ ಕೆಲವು ರಾಜಕಾರಣಿಗಳು ಜಮ್ಮಾ ಹಿಡುವಳಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಬಾಣೆ ಜಾಗವನ್ನು ಸರಕಾರದ ಅರಣ್ಯ ಪ್ರದೇಶವೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಾಣೆ ಜಾಗವು ಸರಕಾರದ ಅರಣ್ಯ ಪ್ರದೇಶವೆಂದು ಸರಕಾರದ ಯಾವ ದಾಖಲೆಗಳಲ್ಲೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕಲ್ಯಾಟಂಡ ಅರುಣ್, ಕಲ್ಯಂಡ ಗಿರೀಶ್, ಕೇಟೋಳಿರ ರಮ್ಮಿ ಉಪಸ್ಥಿತರಿದ್ದರು.