ಸೋಮವಾರಪೇಟೆ, ಸೆ. 24: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2018-2021ರವರೆಗಿನ ನೂತನ ಸಾಲಿನ ಅಧ್ಯಕ್ಷರಾಗಿ ಶನಿವಾರಸಂತೆಯ ಪತ್ರಕರ್ತ ಹರೀಶ್ ಅವರು ನೇಮಕಗೊಂಡಿದ್ದು, ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ನಿರ್ಗಮಿತ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಾಲೂಕು ಸಂಘದ ದಾಖಲೆಗಳನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉದ್ಯಮಿ ಹರಪಳ್ಳಿ ರವೀಂದ್ರ ಅವರು, ಪತ್ರಕರ್ತರು ಸಮಾಜವನ್ನು ಕಾಯುವ ಸೈನಿಕರಿದ್ದಂತೆ. ಪತ್ರಿಕೋದ್ಯಮಕ್ಕೆ ಸಮಾಜವನ್ನು ಜಾಗೃತಿಗೊಳಿಸುವ ಮಹತ್ತರವಾದ ಜವಾಬ್ದಾರಿಯಿದ್ದು, ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಆಗಬೇಕು ಎಂದರು.
ತಾಲೂಕು ಪತ್ರಕರ್ತರ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿ ಮತ್ತು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 1 ಲಕ್ಷ ರೂಪಾಯಿಗಳ ನೆರವು ಒದಗಿಸಲಾಗುವದು ಎಂದು ಇದೇ ಸಂದರ್ಭ ಹರಪಳ್ಳಿ ರವೀಂದ್ರ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮತ್ತು ರಾಜ್ಯ ಸಮಿತಿ ನಿರ್ದೇಶಕ ರಮೇಶ್ ಕುಟ್ಟಪ್ಪ ಅವರುಗಳು ಮಾತನಾಡಿ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಹಲವಷ್ಟು ಪತ್ರಕರ್ತರು ಸಂಕಷ್ಟಕ್ಕೆ ಒಳಗಾಗಿ ಮನೆ, ಆಸ್ತಿ, ಪಾಸ್ತಿ ಕಳೆದುಕೊಂಡಿದ್ದರೂ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕೇವಲ ಭಾಷಣದಲ್ಲಿ ಮಾತ್ರ ಪತ್ರಕರ್ತರ ಹೊಗಳಿಕೆ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿಯ ಜಿಲ್ಲಾ ಪ್ರತಿನಿಧಿ ಎಸ್.ಎ. ಮುರಳೀಧರ್, ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಖಜಾಂಚಿ ಎ.ಪಿ. ವೀರರಾಜು ಅವರುಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಚಂದ್ರಮೋಹನ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಖಜಾಂಚಿ ಬಿ.ಎ. ಭಾಸ್ಕರ್, ಜಂಟಿ ಕಾರ್ಯದರ್ಶಿ ತೇಜಸ್ ಪಾಪಯ್ಯ, ನಿರ್ದೇಶಕರುಗಳಾದ ಕುಂಬೂರು ವಿಶ್ವ, ವನಿತ ಚಂದ್ರಮೋಹನ್, ದಿನೇಶ್ ಮಾಲಂಬಿ, ಕೆ.ಎಸ್. ಮೂರ್ತಿ, ವಹೀದ್ ಜಾನ್, ಶಿವರಾಜ್ ಅವರುಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಸಂಘದ ನಿರ್ದೇಶಕರುಗಳು, ತಾಲೂಕಿನ ಕುಶಾಲನಗರ, ಸುಂಟಿಕೊಪ್ಪ, ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಪತ್ರಕರ್ತರು ಭಾಗವಹಿಸಿದ್ದರು. ಇದೇ ಸಂದರ್ಭ ತಾಲೂಕು ಸಂಘದಿಂದ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದ ಪತ್ರಕರ್ತರಿಗೆ ಬಹುಮಾನ ವಿತರಿಸಲಾಯಿತು.