ವೀರಾಜಪೇಟೆ, ಸೆ. 24: ವೀರಾಜಪೇಟೆಯ ತೆಲುಗರ ಬೀದಿ ನಿವಾಸಿ, ಬಿಜೆಪಿ ಪ್ರಮುಖ ಹಾಗೂ ವಕೀಲ ಟಿ.ಪಿ. ಕೃಷ್ಣ ಅವರಿಗೆ ಪ.ಪಂ. ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಮತ್ತು ಸಂಗಡಿಗ ಚುನಾವಣಾ ಕಣಕ್ಕೆ ಇಳಿಯದಂತೆ, ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಇಂದು ಇಲ್ಲಿನ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪ ಬಹಿಷ್ಕಾರ ಮಾಡಿ ಪ್ರತಿಭಟಿಸಲಾಯಿತು.
ಸಂಘದ ಅಧ್ಯಕ್ಷ ಮಾಲೇಟಿರ ನಂಜಪ್ಪ ಮಾತನಾಡಿ, ಇಂದು ಸಂಘದ ವಿಶೇಷ ಮಹಾಸಭೆಯನ್ನು ಕರೆಯಲಾಗಿತ್ತು. ಕೃಷ್ಣ ಅವರು ಪೊಲೀಸರಿಗೆ ದೂರು ನೀಡಿದರೂ ಸಹ ನಿರ್ಲಕ್ಷ್ಯ ವಹಿಸಿರುವದು ಕಂಡು ಬಂದಿದೆ. ವಕೀಲರ ವೃತ್ತಿಗೆ ಹಾಗೂ ಬದುಕಿಗೆ ಯಾವ ರೀತಿ ತೊಂದರೆ ಆಗದಂತೆ ಪೊಲೀಸರು ಆಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸುವ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಂಘದ ಖಜಾಂಚಿ ಬಿ.ಎನ್. ಸುಬ್ಬಯ್ಯ , ಜಂಟಿ ಕಾರ್ಯದರ್ಶಿ ಕೆ.ವಿ. ಸುನಿಲ್, ಸಮಿತಿ ಸದಸ್ಯರಾದ ಪ್ರಶಾಂತ್ , ಪ್ರೀತಮ್ , ಪೊನ್ನಣ್ಣ , ಅನುಪಮ, ಹೆಚ್.ಆರ್. ಅನ್ವರ್ ಮತ್ತಿತರರು ಉಪಸ್ಥಿತರಿದ್ದರು.