ಮಡಿಕೇರಿ, ಸೆ. 23: ಮುಂಬರುವ ಲೋಕಸಭಾ ಚುನಾವಣೆ 2019 ರ ಸಂಬಂಧ ವಿಶೇಷಚೇತನ ಮತದಾರರ ನೋಂದಣಿ ಹಾಗೂ ಮತದಾರರ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಂಡು ಎಲ್ಲಾ ಅರ್ಹ ವಿಶೇಷಚೇತನ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗವಂತೆ ನೋಂದಣಿ ಮತ್ತು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿ ಮತಗಟ್ಟೆವಾರು ವಿಶೇಷಚೇತನ ಮತದಾರರನ್ನು ಮ್ಯಾಪಿಂಗ್ ಮಾಡಿ ಗುರುತಿಸಬೇಕಿದೆ, ಜೊತೆಗೆ ನೋಂದಣಿಯಾಗದಿರುವ ಅರ್ಹ ವಿಕಲಚೇತನ ಮತದಾರರನ್ನು ನೋಂದಣಿ ಮಾಡಿಸಲು ಕ್ರಮ ವಹಿಸಬೇಕಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರತಿ ಮತಗಟ್ಟೆವಾರು ವಿಶೇಷಚೇತನ ಮತದಾರರ ಮಾಹಿತಿ ಪಡೆದು ಕ್ರೋಢೀಕರಿಸಿ ಡಾಟಾಬೇಸ್ ಮಾಹಿತಿ ಸಿದ್ಧಪಡಿಸುವಂತೆ ಜಿ.ಪಂ. ಸಿಇಒ ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಗಳ ಉಪ ನಿರ್ದೇಶಕರು, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ, ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಅವರು ಈಗಾಗಲೇ ಮತಗಟ್ಟೆವಾರು ರಚಿಸಲಾಗಿರುವ ಬಿಎಜಿಎಸ್ ಸದಸ್ಯರ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‍ಗಳು ಹಾಗೂ ಕ್ಯಾಂಪಸ್ ಅಂಬ್ಯಾಸಡರ್‍ಗಳ ಮೂಲಕ ವಿಶೇಷಚೇತನ ಮತದಾರರ ನೋಂದಣಿ, ಮತದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವಂತೆ ಅವರು ಸಲಹೆ ಮಾಡಿದ್ದಾರೆ.

ಎಲ್ಲಾ ಅರ್ಹ ವಿಶೇಷಚೇತನ ಮತದಾರರು ಚುನಾವಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವದು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ತಿಳಿಸಿದ್ದಾರೆ.