ಮೂರ್ನಾಡು, ಸೆ. 23: ಮೈಸೂರಿನ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ 9 ಮತ್ತು ಪದವಿ ಕಾಲೇಜಿನ 5 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ನ್ನು ನೀಡಲಾಯಿತು.
ಮೂರ್ನಾಡು ವಿದ್ಯಾ ಸಂಸ್ಥೆಯ ಕಾವೇರಿ ಸಭಾಂಗಣ ದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚೆಕ್ನ್ನು ವಿತರಿಸಿ ಮಾತನಾಡಿದ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕಟ್ಟೇರ ಕಾರ್ಯಪ್ಪ ಮಾತನಾಡಿ, ಟ್ರಸ್ಟ್ನಿಂದ ಈ ಬಾರಿ ಸುಮಾರು 306 ವಿದ್ಯಾರ್ಥಿಗಳಿಗೆ ರೂ. 20 ಲಕ್ಷಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವಾಗಿ ಪಡೆದ ಹಣವನ್ನು ದುಂದು ವೆಚ್ಚ ಮಾಡದಂತೆ ನೋಡಿಕೊಳ್ಳಬೇಕು. ಪ್ರತಿಯೋರ್ವರ ಮನೆಯಲ್ಲಿ ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು. ವಿದ್ಯಾರ್ಥಿಗಳು ದೊಡ್ಡದಾದ ಗುರಿ ಹೊಂದಿದ್ದರೆ ಮಾತ್ರ ಜೀವನದಲ್ಲಿ ಉತ್ತಮ ಸಾಧನೆಗೈಯಲು ಸಾಧ್ಯ ಎಂದು ತಿಳಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಪಟ್ಟಡ ಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನು ಮುಂದಕ್ಕೆ ಸಿಗುವ ವಿದ್ಯಾರ್ಥಿ ವೇತನಕ್ಕೆ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ವಿಶೇಷ ಕಾಳಜಿ ವಹಿಸಿ ಓದಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಚಾರಿಟೇಬಲ್ ಟ್ರಸ್ಟ್ನ ಖಜಾಂಚಿ ಚೇಂದ್ರಿಮಾಡ ಮಾದಪ್ಪ, ಟ್ರಸ್ಟಿ ಕರ್ನಲ್ ಚೌರೀರ ಗಣಪತಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕ ನೆರವಂಡ ರಾಜಾ ಮಾದಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ ಉಪಸ್ಥಿತರಿದ್ದರು.