ವೀರಾಜಪೇಟೆ, ಸೆ. 22: ವಿಜಯಾಭ್ಯುದಯ ಶಾಲಿವಾಹನ ಶಕ 1939ನೇ ವಿಲಂಬಿ ನಾಮ ಸಂವತ್ಸರದ ಶುದ್ಧ ತೃತೀಯದಂದು ತಾ. 13 ರಂದು ಪ್ರತಿಷ್ಠಾಪಿಸಲಾದ ಗೌರಿಗಣೇಶನ ಮೂರ್ತಿಗಳನ್ನು ಅನಂತ ಪದ್ಮನಾಭ ವ್ರತದ ದಿನವಾದ ತಾ. 23 ರಂದು (ಇಂದು) ಸಾಮೂಹಿಕ ಮೆರವಣಿಗೆ ಯೊಂದಿಗೆ ವಿಸರ್ಜನೋತ್ಸವವು ನಡೆಯಲಿದೆ.ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯ ಗಣಪತಿ ಸೇವಾ ಟ್ರಸ್ಟ್‍ನ ಉತ್ಸವ ಸಮಿತಿಯ ಗಣಪತಿಯನ್ನು ಸಾಂಪ್ರದಾಯ ಬದ್ಧವಾಗಿ ಪೂಜೆ ಪುನಸ್ಕಾರದೊಂದಿಗೆ ಅಲಂಕೃತ ಮಂಟಪದಲ್ಲಿ ಕೂರಿಸಿ ಪೂಜೆ ಸಲ್ಲಿಸಿ ನೂರಾರು ಇಡುಗಾಯಿ ಹಾಕಿದ ನಂತರ ರಾತ್ರಿ 9 ಗಂಟೆಗೆ ಪ್ರಥಮವಾಗಿ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಗುವದು.ಗಣಪತಿ ಸೇವಾ ಟ್ರಸ್ಟ್‍ನ ಮಂಟಪ ಬಸವೇಶ್ವರ ದೇವಾಲಯ ವನ್ನು ತಲಪುತ್ತಲೇ ರಾತ್ರಿ 11 ಗಂಟೆಗೆ ಬಸವೇಶ್ವರ ದೇವಾಲಯದ ಗೌರಿಗಣೇಶ ಉತ್ಸವ ಸಮಿತಿ ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ವಿವಿಧೆಡೆಗಳಿಂದ ಬರುವ ಮಂಟಪಗಳು ಮುಖ್ಯ ರಸ್ತೆಗೆ ಬಂದು ಸೇರಿ ಸರದಿ ಪ್ರಕಾರ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಸಾಮೂಹಿಕ ಮೆರವಣಿಗೆಯ ಮಂಟಪಗಳು ಬೆಳಗ್ಗಿನ 6 ಗಂಟೆಯ ವೇಳೆಗೆ ಖಾಸಗಿ ಬಸ್ ನಿಲ್ದಾಣದ ಬಳಿಯ ಗೌರಿ ಕೆರೆಯನ್ನು ತಲಪುತ್ತಲೇ ಇಲ್ಲಿಯೂ ಸರದಿ ಪ್ರಕಾರ ಸಾಂಪ್ರದಾಯಿಕ ಪೂಜೆಯೊಂದಿಗೆ ವಿಸರ್ಜನೋತ್ಸವ ಜರುಗಲಿದೆ.

ಪವಿತ್ರವಾದ ಗೌರಿಕೆರೆಯಲ್ಲಿ ಗೌರಿಗಣೇಶನ ವಿಸರ್ಜನೋತ್ಸವಕ್ಕೆ ಇಲ್ಲಿನ ಪಟ್ಟಣ ಪಂಚಾಯಿತಿ ಎಲ್ಲ ವ್ಯವಸ್ಥೆ ಮಾಡಿರುವದಾಗಿ ಮುಖ್ಯಾಧಿಕಾರಿ ಶ್ರೀಧರ್ ‘ಶಕ್ತಿ’ಗೆ ತಿಳಿಸಿದ್ದಾರೆ.