ಪೊನ್ನಂಪೇಟೆ, ಸೆ. 22 : ವೀರಾಜಪೇಟೆಯಿಂದ ಕೇವಲ 55 ಕಿ.ಮೀ. ದೂರದಲ್ಲಿರುವ ಕಣ್ಣಾನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೊಚ್ಚಲ ಪ್ರಯಾಣಿಕ ವಿಮಾನವೊಂದು ಪರೀಕ್ಷಾರ್ಥದ ಭಾಗವಾಗಿ ತಾ. 20 ರಂದು ಯಶಸ್ವಿಯಾಗಿ ಇಳಿಯಿತು. ವಿಮಾನ ನಿಲ್ದಾಣದ ತಾಂತ್ರಿಕ ಕೆಲಸ-ಕಾರ್ಯಗಳು ಅಂತಿಮ ಹಂತ ತಲುಪಿದ್ದು, ಈ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ದಿನಗಣನೆ ಆರಂಭಗೊಂಡಿದೆ.

ಗುರುವಾರದಂದು ಕೇರಳದ ತಿರುವನಂತಪುರಂನಿಂದ ಹೊರಟ 738 ಸಂಖ್ಯೆಯ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಬೋಯಿಂಗ್ ವಿಮಾನ ಬೆಳಿಗ್ಗೆ 10.33ಕ್ಕೆ ಮಟ್ಟನೂರಿನಲ್ಲಿರುವ ಕಣ್ಣಾನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಬಳಿಕ ವಿಮಾನ ನಿಲ್ದಾಣದ ಸುಸಜ್ಜಿತ ರನ್‍ವೇಯ ಮೇಲ್ಬಾಗದಲ್ಲೆ ಕೆಲ ನಿಮಿಷಗಳ ಹಾರಾಟ ನಡೆಸಿದ ಈ ವಿಮಾನ ಎಲ್ಲಾ ದಿಕ್ಕುಗಳಲ್ಲಿ ಇಳಿಯಬಹುದಾದ ಸಾಧ್ಯತೆಗಳನ್ನು ಪರಿಶೀಲಿಸಿ ಅಂತಿಮವಾಗಿ 10.52 ಗಂಟೆಗೆ ನಿಲ್ದಾಣದ ಬಲ ದಿಕ್ಕಿನಿಂದ ಭೂಸ್ಪರ್ಶ ಮಾಡಿತು. ಚೊಚ್ಚಲ ವಿಮಾನವೊಂದು ರನ್‍ವೇ ಗೆ ಇಳಿದು ನಿಲುಗಡೆ ಪ್ರದೇಶಕ್ಕೆ ಬರುತ್ತಿದ್ದಂತೆ ಮೊದಲೇ ತಯಾರಾಗಿ ನಿಂತಿದ್ದ ನಿಲ್ದಾಣದ ಎರಡು ಅತ್ಯಾಧುನಿಕ ಅಗ್ನಿ ಶಾಮಕ ವಾಹನದಿಂದ ‘ಜಲ ವಂದನೆ’ ನೀಡಿ ಸ್ವಾಗತಿಸಲಾಯಿತು.

ಪೈಲಟ್ ಎನ್.ಎಸ್. ರಾವ್ ಅವರು ಚಾಲಿಸಿದ ಈ ವಿಮಾನದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಏರ್‍ಕ್ರಾಪ್ಟ್ ಎಂಜಿನಿಯರ್ ಸೇರಿದಂತೆ ಕೆಲ ಸಿಬ್ಬಂದಿಗಳಿದ್ದರು. ಇವರು ವಿಮಾನದಿಂದ ಇಳಿಯುತ್ತಿದ್ದಂತೆ ಕಣ್ಣಾನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಕೆ.ಐ.ಎ.ಎಲ್.) ದ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸಿದಾಸ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಸ್ವಾಗತಿಸಿದರು.

ಅಕ್ಟೋಬರ್ ಕೊನೆ ವಾರದಿಂದ ವಿಮಾನಯಾನ ಸೇವೆ ಇಲ್ಲಿ ಆರಂಭಗೊಳ್ಳಲಿದ್ದು, ನವಂಬರ್‍ನಿಂದ ಪೂರ್ಣಪ್ರಮಾಣದ ಅಂತರಾಷ್ಟ್ರೀಯ ವಿಮಾನ ಸೇವೆ ಪ್ರಾರಂಭವಾಗಲಿದೆ.

-ಚಿತ್ರ, ವರದಿ : ರಫೀಕ್ ತೂಚಮಕೇರಿ