ಮಡಿಕೇರಿ, ಸೆ. 22: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸಕಲೇಶಪುರ ಹೆದ್ದಾರಿಯ ನಡುವೆ, ಹಾಲೇರಿಯಿಂದ ಹಟ್ಟಿಹೊಳೆಯ ತನಕ ಆರು ಕಡೆಗಳಲ್ಲಿ ರಸ್ತೆಯು ಜಲಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿರುವದನ್ನು ಸರಿಪಡಿಸುವ ಕೆಲಸ ಇನ್ನೂ ಕೂಡ ಸಮರೋಪಾದಿಯಲ್ಲಿ ಸಾಗಿದೆ. ಒಂದು ತಿಂಗಳ ಹಿಂದೆ ಆಗಸ್ಟ್ 16 ರಂದು ಅಲ್ಲಲ್ಲಿ ಕೊಚ್ಚಿ ಹೋಗಿರುವ ರಸ್ತೆಯ ಪುನರ್ ನಿರ್ಮಾಣ ಭರದಿಂದ ನಡೆಯುತ್ತಿದೆ. ಈ ನಡುವೆಯೇ ನಿನ್ನೆಯಿಂದ ಲಘು ವಾಹನಗಳ ಓಡಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ಖುದ್ದು ಬಸ್ನಲ್ಲಿ ಪರಿಶೀಲಿಸಿದರು.ಹಾಲೇರಿಯ ಸಿಂಕೋನ ತೋಟದಲ್ಲಿ ಕಾಫಿ ತೋಟದ ಬೆಟ್ಟ ಸಾಲು ಜಲಸ್ಫೋಟದಿಂದ ಕುಸಿದು, ಹೆದ್ದಾರಿಯು ಕೊಚ್ಚಿಹೋಗಿರುವ ಪರಿಣಾಮ ಅಲ್ಲಿ ಪರ್ಯಾಯ ಮಾರ್ಗದೊಂದಿಗೆ ಸಂಪರ್ಕ ಸಾಧಿಸಲಾಗುತ್ತಿದೆ. ಈ ಕೆಲಸ ಮುಕ್ತಾಯ ಹಂತದೊಂದಿಗೆ, ತೇವಾಂಶ ನಿಯಂತ್ರಿಸಲು ಅಲ್ಲಲ್ಲಿ ಮೋರಿಗಳನ್ನು ಅಳವಡಿಸಿ ಮಣ್ಣು ತುಂಬುವ ಕಾರ್ಯ ನಡೆದಿದೆ.
ಅನತಿ ದೂರದಲ್ಲಿ ಜಲಮೂಲ ಗಳ ನಡುವೆ ಬೆಟ್ಟ ಸಾಲು ಕುಸಿದಿರುವ ಮತ್ತೊಂದೆಡೆಯೂ, ರಾಶಿ ರಾಶಿ ಮಣ್ಣು ತೆರವುಗೊಳಿಸಿ ಕಳೆದ ಇಪ್ಪತ್ತು ದಿನಗಳಿಂದ ರಸ್ತೆ ಸಂಪರ್ಕ ಸಾಧಿಸುವ ಪ್ರಯತ್ನ ಸಾಗಿದೆ, ಹೆದ್ದಾರಿಯ ಉದ್ದಕ್ಕೂ ಭೂಕುಸಿತದ ಭೀಕರತೆಗೆ ಸಾಕ್ಷಿಯೆಂಬಂತೆ ಅಲ್ಲಲ್ಲಿ ರಾಶಿ ರಾಶಿ ಮಣ್ಣನ್ನು ಕಾಣುವಂತಾ ಗಿದೆ. ಇನ್ನೊಂದೆಡೆ ಜಲಸ್ಫೋಟದಿಂದ ಕಾಫಿ ತೋಟ ಸಹಿತ ಬೆಟ್ಟಗಳು ಜರಿದಿರುವ ಪ್ರದೇಶಗಳಲ್ಲಿ ಇಂದು, ನೀರಿನ ಮೂಲವೇ ಮಾಯವಾಗಿ ಅಲ್ಲಲ್ಲಿ ಈ ಸ್ಥಳಗಳು ಹೊಸ ಗುಡ್ಡಗಳನ್ನು ಸೃಷ್ಟಿಗೊಂಡ ಹಸಿರಿನ ಸುಳಿವೇ ಇಲ್ಲದಂತಹ ಮರಳುಗಾಡಿನಂತೆ ಭಾಸವಾಗುತ್ತಿದೆ.
(ಮೊದಲ ಪುಟದಿಂದ)
ಸಾಲು ಸಾಲು ತೋಟ ನಾಶ: ಹಾಲೇರಿಯ ಸಿಂಕೋನ ತೋಟದ 40 ಎಕರೆಗೂ ಅಧಿಕ ಪ್ರದೇಶ ಹಾನಿಗೊಂಡಿದ್ದರೆ, ಅಲ್ಲಿಂದ ಅನತಿ ದೂರದಲ್ಲಿ ಬಿಜ್ಜಂಡ ಕುಟುಂಬಸ್ಥರು, ಅಯ್ಯಕುಟ್ಟಿರ, ಮಂಡೇಪಂಡ, ಪಂದಿಕುತ್ತಿರ, ಜಗ್ಗಾರಂಡ, ಅಪ್ಪನೆರ ವಂಡ ಕುಟುಂಬಗಳ ಸಾಲು ಸಾಲು ಕಾಫಿ ತೋಟಗಳು ಹತ್ತಾರು ಎಕರೆಗಟ್ಟಲೆ ನಾಶಗೊಂಡಿರುವ ಆಘಾತಕಾರಿ ದೃಶ್ಯ ಗೋಚರಿಸಲಿದೆ. ಮಾತ್ರವಲ್ಲದೆ, ರಸ್ತೆಯ ಇಕ್ಕೆಡೆಗಳಲ್ಲಿ ಅನೇಕ ಸಣ್ಣ ಪುಟ್ಟ ಮನೆಗಳ ಸಹಿತ ಅಲ್ಪ ಕೃಷಿಯೊಂದಿಗೆ ತೋಟಗಳನ್ನು ರೂಪಿಸಿಕೊಂಡಿದ್ದ ಯಾವ ಸಂಸಾರವೂ ಗೋಚರಿಸದೆ ಗ್ರಾಮಗಳನ್ನು ತೊರೆದಿರುವ ಸುಳಿವು ಲಭಿಸುತ್ತಿದೆ.
ಕಂಗಾಲಾಗಿರುವ ಬೆಳೆಗಾರರು : ಹಾಲೇರಿಯ ಕಡಂದಾಳು ವ್ಯಾಪ್ತಿಯ ಮುದ್ದುರ ಎಂ. ತಮ್ಮಯ್ಯ ಎಂಬವರಿಗೆ ಸೇರಿರುವ ಕಾಫಿ ತೋಟದ ಹತ್ತಾರು ಕಡೆಗಳಲ್ಲಿ ಜಲಸ್ಫೋಟದಿಂದ ಭೂಮಿಯು ಕಾಫಿ ಫಸಲು ಸಹಿತ ಹಾನಿಗೊಂಡು, ಈ ಪ್ರದೇಶದ ಮರಗಳ ಸಹಿತ ತೋಟ ಈಗಿನ ಬಿಸಿಲಿನ ಹೊಡೆತದಿಂದ ಒಣ ಗುತ್ತಿರುವ ದೃಶ್ಯ ಕಾಣ ಬರುತ್ತಿದೆ. ಅಲ್ಲಿನ ವಡ್ಡಚೆಟ್ಟಿರ, ಬಿಜ್ಜಂಡ ಕುಟುಂಬಸ್ಥರ ಸಾಲು ಸಾಲು ಗದ್ದೆ ಬಯಲಿನಲ್ಲಿ ಮಣ್ಣು ಆವರಿಸಿ ಕೊಂಡಿದ್ದು, ಭೂಕುಸಿತದಿಂದ ಹತ್ತಾರು ಕಡೆಗಳಲ್ಲಿ ಕಾಫಿ ಗಿಡಗಳು ಮಣ್ಣು ಪಾಲಾಗಿರುವ ಚಿತ್ರಣ ಎದುರಾಗಲಿದೆ. ಹೀಗೆ ಮುಂದುವರಿದರೆ ಹಾಲೇರಿ - ಹಟ್ಟಿಹೊಳೆ ನಡುವೆ ಸುಮಾರು 13 ಕಿ.ಮೀ. ವ್ಯಾಪ್ತಿಯಲ್ಲಿ ಬೃಹತ್ ಹಾನಿ ಎದುರಾಗುತ್ತದೆ.
ಶಾಸಕರಿಗೂ ಹಾನಿ : ಹೀಗೆ ಮುಂದುವರಿದರೆ, ಹಟ್ಟಿಹೊಳೆಯಿಂದ ಮೂರು ಕಿ.ಮೀ. ಈಚೆಗೆ ರಸ್ತೆ ತಿರುವೊಂದರಲ್ಲಿ ಬೃಹತ್ ಪ್ರಪಾತ ಸೃಷ್ಟಿಯಾಗಿ, ಹೆದ್ದಾರಿಯನ್ನೇ ತುಂಡರಿಸಿಕೊಂಡು ಮುನ್ನುಗ್ಗಿರುವ ನೀರು ಪಾಳು ಗದ್ದೆ ಬಯಲನ್ನು ಮರುಭೂಮಿಯಾಗಿ ಪರಿವರ್ತಿಸಿರು ವಂತೆ ಗೋಚರಿಸಲಿದೆ. ಇಲ್ಲಿ ಇಂದಿಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮೋರಿ ನಿರ್ಮಿಸಿ ಮರಳು ಮೂಟೆಗಳ ಜೋಡಣೆ ಯೊಂದಿಗೆ, ಕಬ್ಬಿಣ ಸಲಾಕೆಯ ಕವಚದೊಂದಿಗೆ ಮಾರ್ಗ ಸಂಪರ್ಕ ಕಲ್ಪಿಸಲಾಗುತ್ತಿದೆ. ಅದೇ ಜಾಗದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಹತ್ತಾರು ಎಕರೆ ಕಾಫಿ ತೋಟ ಕೊಚ್ಚಿ ಹೋಗಿದೆ. ಇನ್ನೊಂದೆಡೆ ಮುದ್ದುರ ರಾಮ್ ಬೆಳ್ಯಪ್ಪ ಹಾಗೂ ಪಂದಿಕುತ್ತಿರ ಕುಟುಂಬಸ್ಥರ ಹತ್ತಾರು ಎಕರೆ ಕಾಫಿ ತೋಟ ಸಹಿತ ಸಾಕಷ್ಟು ಹಾನಿ ಎದುರಾಗುತ್ತದೆ.
ಲಕ್ಷ ಲಕ್ಷ ಹಾನಿ : ಇದೇ ಮಾರ್ಗದಲ್ಲಿ ಮುಂದುವರಿದರೆ, ಪಂದಿಕುತ್ತಿರ ಚಿತ್ರ ಸುಬ್ಬಯ್ಯ ಅವರ ಹೆದ್ದಾರಿ ಬದಿಯ ಮನೆ ಸರ್ವನಾಶಗೊಂಡು, ಅವರ ಗದ್ದೆ ಬಯಲಿನ ನಡುವೆ ಬಂಗಲೆಯ ಅವಶೇಷಗಳೊಂದಿಗೆ ರಸ್ತೆಯ ಕುರುಹು ಡಾಮರು ಸಹಿತ ಅಲ್ಲಲ್ಲಿ ಗೋಚರಿಸಲಿದೆ. ಈ ಗದ್ದೆ ಬಯಲಿನ ಮತ್ತೊಂದೆಡೆಗೆ ಪಂದಿಕುತ್ತಿರ ಕಿಟ್ಟಿ ದೇವಯ್ಯ ಬಂಗಲೆಗೆ ತೆರಳುವ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಅವರ ಪುತ್ರ ಪಿ.ಡಿ. ಗಣಪತಿ ಉಸ್ತುವಾರಿ ನೋಡಿಕೊಂಡಿರುವ ಹತ್ತಾರು ಎಕರೆ ತೋಟ ನಾಶ ಗೊಂಡಿದೆ. ಒಟ್ಟಿನಲ್ಲಿ ಹಾಲೇರಿಯಿಂದ ಹಟ್ಟಿಹೊಳೆ ಸೇತುವೆ ದಾಟಿ ಸಾಗಿದರೆ, ನಂದಾ ಬೆಳ್ಯಪ್ಪ ಅವರ ತೋಟ ಸಹಿತ ಅಲ್ಲಲ್ಲಿ ಪ್ರಾಕೃತಿಕ ವಿಕೋಪದ ತೀವ್ರತೆ ಮಾದಾಪುರ ತನಕವೂ ಗೋಚರಿಸಲಿದೆ. ಪರಿಣಾಮ ಈ ಹೆದ್ದಾರಿ ಕಾಮಗಾರಿ ಮುಕ್ತಾಯ ಹಂತದಲ್ಲಿ ಗೋಚರಿಸಿದರೂ, ಸದ್ಯದ ಪರಿಸ್ಥಿತಿಯಲ್ಲಿ ಭಾರೀ ವಾಹನಗಳ ಸಂಚಾರ ಕಷ್ಟಸಾಧ್ಯವಾಗಲಿದೆ. ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಸಂಪಾಜೆ ತನಕ ಎದುರಾಗಿರುವ ಪರಿಸ್ಥಿತಿಯ ಮತ್ತೊಂದು ಮಜಲಿನಂತೆ ಮಡಿಕೇರಿ - ಸಕಲೇಶಪುರ ಹೆದ್ದಾರಿಯ ಹಟ್ಟಿಹೊಳೆವರೆಗಿನ ಹಾನಿಯು ತೀವ್ರ ಆತಂಕ ಸೃಷ್ಟಿಸಿರುವದಾಗಿದೆ.