ಮಡಿಕೇರಿ, ಸೆ. 22: ಕುಶಾಲನಗರದ ‘ಶಕ್ತಿ’ಯ ಹಲವು ಏಜೆಂಟರುಗಳಲ್ಲಿ ರಾಜಣ್ಣ ಕೂಡಾ ಒಬ್ಬ ಶಿಸ್ತುಬದ್ಧ ವ್ಯಕ್ತಿ. 75ರ ಹರೆಯದಲ್ಲೂ ನಿಲ್ಲದ ಉತ್ಸಾಹದೊಂದಿಗೆ ಪ್ರಾಮಾಣಿಕತೆಯನ್ನು ಮೆರೆದವರು. ಪ್ರತೀ ತಿಂಗಳೂ ಚಂದಾಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿದ್ದವರು. ಅವರ ಶ್ರದ್ಧಾ ಕೆಲಸದಲ್ಲಿ ನೆರವಾಗುತ್ತಿದ್ದುದು ಮಕ್ಕಳೂ ಸೇರಿದಂತೆ ಇಡೀ ಕುಟುಂಬ.ಇತ್ತೀಚೆಗೆ ವಯೋಸಹಜ ಅನಾರೋಗ್ಯ ಕಾಡಲಾರಂಭಿಸಿತು. ಹಾಸಿಗೆ ಹಿಡಿದ ರಾಜಣ್ಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.ಮಕ್ಕಳನ್ನು ಪಕ್ಕಕ್ಕೆ ಕರೆದ ರಾಜಣ್ಣ ‘ಶಕ್ತಿ’ ಪತ್ರಿಕೆಯ ಹಣ ಪಾವತಿಸಲು ಬಾಕಿ ಇದೆ, ಸುಬ್ಬಯ್ಯ ಅವರು ಬಂದರೆ ಕೊಟ್ಟು ಬಿಡಿ’ ಎಂದರು.
ಮಾತು ಅಲ್ಲಿಗೇ ನಿಲ್ಲಲಿಲ್ಲ. ಮೊಮ್ಮಗಳನ್ನು ಕರೆದು ‘ಶಕ್ತಿ’ ಏಜೆನ್ಸಿ ಮುಂದುವರಿಸಬೇಕು; ಯಾವದೇ ಕಾರಣಕ್ಕೂ ನಿಲ್ಲಿಸಬಾರದು’ ಎಂದು ಸೂಚಿಸಿದರು.
ಎಲ್ಲರ ಯೋಗ ಕ್ಷೇಮದ ಬಳಿಕ ಭೂಮಿಯ ಋಣ ಮುಗಿದು ಈ ಲೋಕ ತ್ಯಜಿಸಿದರು.ಶ್ರೀಯುತರ ನಿಧನದ ಸುದ್ದಿ ತಡವಾಗಿ ಮುಟ್ಟಿತ್ತು. ಆ ವೇಳೆಗೆ ಅಂದಿನ ಪತ್ರಿಕೆ ಬಂಡಲು ಅವರ ಮನೆ ತಲಪಿತ್ತು. ಪಿತೃ ಶೋಕದಲ್ಲಿದ್ದರೂ ಮಕ್ಕಳು ‘ಶಕ್ತಿ’ಯನ್ನು ಚಂದಾದಾರರಿಗೆ ತಲಪಿಸಿದ್ದರು. ಓದುಗರೇ ಮನವಿ ಮಾಡಿ ಒಂದೆರಡು ದಿನಗಳ ಮಟ್ಟಿಗೆ ಸುಧಾರಿಸಿಕೊಳ್ಳಿ ಎಂದರು.ಹಿರಿಯ ಚೇತನಕ್ಕೆ ‘ಶಕ್ತಿ’ಯ ಶ್ರದ್ಧಾಂಜಲಿ.
ಕುಟುಂಬಕ್ಕೆ ಬಳಗದ ಸಾಂತ್ವನ
-ಸಂಪಾದಕ