ಮಡಿಕೇರಿ, ಸೆ. 22: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಸೇರಿದಂತೆ ಚರಂಡಿ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗೆ ಚಾಲನೆ ನೀಡಿದ್ದು, ಮಡಿಕೇರಿಯ ನಾಗರಿಕರು ಆಯಾ ವಸತಿ ಪ್ರದೇಶದ ಕೆಲಸ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕತ್ರಯರು ಕರೆ ನೀಡಿದ್ದಾರೆ.
ನಿನ್ನೆ ನಗರದ ಮಹದೇವಪೇಟೆ ಯಲ್ಲಿ ಭೂಮಿ ಪೂಜೆ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮೇಲ್ಮನೆ ಸದಸ್ಯರುಗಳಾದ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ, ಜನತೆ ತಮ್ಮ ತಮ್ಮ ವಸತಿ ಪ್ರದೇಶದ ಕೆಲಸಗಳ ಬಗ್ಗೆ ನಿಗಾವಿಡುವಂತೆ ಮಾರ್ನುಡಿದರು.
ಮಡಿಕೇರಿಯ ರಸ್ತೆಗಳು ತೀರಾ ಹಾಳಾಗಿದ್ದು, ಎಲ್ಲ ರಸ್ತೆಗಳೊಂದಿಗೆ ಚರಂಡಿಗಳ ದುರಸ್ತಿ ಹಾಗೂ ಪಾದಚಾರಿ ಮಾರ್ಗವನ್ನು ದಸರಾ ಮುನ್ನ ತುರ್ತಾಗಿ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಳಜಿ ವಹಿಸಬೇಕೆಂದು ಈ ಸಂದರ್ಭ ಅವರುಗಳು ಸಲಹೆ ಮಾಡಿದರು.
ಆಯಾ ವಾರ್ಡ್ ಸದಸ್ಯರು ಕೂಡ ಕೆಲಸ ಕಳಪೆಯಾಗದಂತೆ ಮತ್ತು ಸರಕಾರದ ಅನುದಾನ ಸದ್ಬಳಕೆ ಯಾಗುವಂತೆ ನೋಡಿಕೊಳ್ಳುವಂತೆ ತಿಳಿ ಹೇಳಿದ ಶಾಸಕತ್ರಯರು, ಒಳ್ಳೆಯ ಕೆಲಸದೊಂದಿಗೆ ಜನರಿಗೂ ಒಳಿತಾಗುವಂತೆ ಹಾಗೂ ಯಾರಿಗೂ ಕೆಟ್ಟ ಹೆಸರು ಬರದಂತೆ ಸಲಹೆಯಿತ್ತರು.
ನಗರಸಭೆಯ ನೂತನ ಆಯುಕ್ತ ರಮೇಶ್ ಹಾಗೂ ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಪ್ರಬಾರ ಇಂಜಿನಿಯರ್ ವನಿತ ಸಹಿತ ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಪ್ರಮುಖರು ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಅರ್ಚಕ ಸತೀಶ್ ಭಟ್ ಪೂಜೆ ನೆರವೇರಿಸಿದರು.