ಮಡಿಕೇರಿ, ಸೆ. 22: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಂತಹ ಸನ್ನಿವೇಶದಿಂದಾಗಿ ವಿದ್ಯಾಸಂಸ್ಥೆಗಳಿಗೆ ಸಾಲು ಸಾಲು ರಜೆ ಘೋಷಣೆಯಾಗಿತ್ತು. ಜಿಲ್ಲೆಯಲ್ಲಿ ಸುಮಾರು 20 ದಿನಗಳಿಗೂ ಅಧಿಕ ಮಳೆ-ಗಾಳಿಯಿಂದಾಗಿ ರಜೆ ನೀಡಲ್ಪಟ್ಟಿತ್ತು. ಇದರೊಂದಿಗೆ ಸಂಭವಿಸಿದ ದುರಂತಗಳಿಂದಾಗಿ ಹಲವು ಶಾಲೆಗಳು ಪರಿಹಾರ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಹಳಿತಪ್ಪಿದಂತಿದ್ದ ಶೈಕ್ಷಣಿಕ ವ್ಯವಸ್ಥೆ ಇದೀಗ ತಾನೇ ಸರಿಯಾಗುತ್ತಿದೆ.

ಇದರ ಬೆನ್ನಲ್ಲೇ ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳ ಆಂಗ್ಲ ಭಾಷಾ ಶಿಕ್ಷಕರಿಗೆ ಹತ್ತು ದಿನಗಳ ಕಾಲದ ತರಬೇತಿ ಕಾರ್ಯಾಗಾರ ನಿಗದಿಯಾಗಿದೆ. ಕೂಡಿಗೆಯ ಡಯಟ್‍ನಲ್ಲಿ ಟೆಕ್ನಾಲಜಿ ಏಯ್ಡೆಡ್ ಲರ್ನಿಂಗ್ ಪ್ರೋಗ್ರಾಂ (ಖಿಂಐP) ನಂತೆ ಈ ತರಬೇತಿ ನಿಗದಿಯಾಗಿದೆ. ಮೊದಲೇ ಆಂಗ್ಲ ಭಾಷಾ ಪಠ್ಯ ಕ್ಲಿಷ್ಟಕರ ಎಂಬಂತಹ ಮಾತು ಸರಕಾರಿ ಶಾಲೆಗಳಲ್ಲಿ ಇದ್ದು, ಇದೀಗ ಪ್ರೌಢಶಾಲೆಗಳ ಆಂಗ್ಲ ಶಿಕ್ಷಕರನ್ನು ನಿರಂತರವಾಗಿ ಹತ್ತು ದಿನಗಳ ಕಾಲದ ತರಬೇತಿಗೆ ನಿಯೋಜಿಸಿದಲ್ಲಿ ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ.

ಇದು ಶಿಕ್ಷಕರಿಗೆ ಅಗತ್ಯವಿರುವ ರಾಜ್ಯಮಟ್ಟದಲ್ಲಿ ಪೂರ್ವ ನಿರ್ಧರಿತ ಯೋಜನೆಯ ಕಾರ್ಯಾಗಾರವಾಗಿದ್ದರೂ ಕೊಡಗು ಜಿಲ್ಲೆಯ ಮಟ್ಟಿಗೆ ಪ್ರಸ್ತುತ ಈ ಸಂದರ್ಭದಲ್ಲಿ ಕಾರ್ಯಾಗಾರ ಎಷ್ಟು ಔಚಿತ್ಯಪೂರ್ಣ ಎಂಬಂತಾಗಿದೆ.

ಸತತ ರಜೆಗಳಿಂದಾಗಿ ಹಾಗೂ ಶಾಲೆಗಳು ಪರಿಹಾರ ಕೇಂದ್ರಗಳಾಗಿದ್ದರಿಂದ ಸಮಸ್ಯೆಯಾಗಿತ್ತು. ಇದೀಗ ಮತ್ತೆ 10 ದಿನಗಳ ಆಂಗ್ಲ ಶಿಕ್ಷಕರು ತರಬೇತಿಗೆ ಹೋಗಬೇಕಾಗಿರುವದರಿಂದ ವಿದ್ಯಾರ್ಥಿಗಳಿಗೆ ಬಳಿಕ ಒತ್ತಡದಿಂದ ಪಠ್ಯ ಕಲಿಯಬೇಕಾಗಿದೆ ಎಂದು ಹಲವು ಎಸ್‍ಡಿಎಂಸಿಯ ಪ್ರಮುಖರು ಹೇಳಿದ್ದಾರೆ.

ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಇದು ಅನ್ವಯಿಸುವದಿಲ್ಲ. ಇದರಿಂದ ಸರಕಾರಿ ಶಾಲೆಯ ಮಕ್ಕಳ ಒತ್ತಡ ಮುಂದಿನ ದಿನದಲ್ಲಿ ಹೆಚ್ಚಾಗಲಿದೆ. ಮಡಿಕೇರಿ ತಾಲೂಕಿನ 8, ವೀರಾಜಪೇಟೆ ತಾಲೂಕಿನ 13 ಹಾಗೂ ಸೋಮವಾರಪೇಟೆ ತಾಲೂಕಿನ 20 ಸರಕಾರಿ ಪ್ರೌಢಶಾಲೆಗಳ ಆಂಗ್ಲ ಶಿಕ್ಷಕರು ತಾ. 24 ರಿಂದ ಅಕ್ಟೋಬರ್ 3ರ ತನಕ ತರಬೇತಿಗೆ ನಿಯೋಜಿತರಾಗಿದ್ದಾರೆ.

ಬೆಳಿಗ್ಗೆ 9.30 ರಿಂದ ಸಂಜೆ 6.30ರ ವರೆಗೆ ತರಬೇತಿ ನಡೆಯಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಬರ್ ಅವರು ತರಬೇತಿ ಅವಧಿಯಲ್ಲಿನ ತರಗತಿಗಳು ಮತ್ತೆ ನಡೆಸಲ್ಪಡುತ್ತದೆ ಎಂದಿದ್ದಾರೆ. ಆದರೆ ಈ ಬಾರಿಯ ಸನ್ನಿವೇಶದಿಂದ ಈಗಾಗಲೇ ತರಗತಿಗಳು ವಿಳಂಬವಾಗಿದ್ದು, ಮುಂದೆ ನಡೆಸುವ ಪಠ್ಯ ವಿದ್ಯಾರ್ಥಿಗಳಿಗೆ ಒತ್ತಡವಾಗಲಿದೆ ಎಂದು ಹೇಳಲಾಗುತ್ತಿದೆ.

ಶಿಕ್ಷಕರುಗಳು ಹೇಗೋ ತಮ್ಮ ಕರ್ತವ್ಯ ಮುಗಿಸಿಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಒಟ್ಟೊಟ್ಟಿಗೆ ತರಗತಿ ನಡೆಸುವದು ಹೆಚ್ಚು ಒತ್ತಡಕ್ಕೆ ಕಾರಣವಾಗುತ್ತದೆ ಎನ್ನುವದು ಹಲವರ ಅಭಿಪ್ರಾಯವಾಗಿದ್ದು, ಸಂಬಂಧಿಸಿದವರು ಪ್ರಸಕ್ತ ವರ್ಷ ಕೊಡಗಿನ ಪರಿಸ್ಥಿತಿಯನ್ನು ಅರಿತು ಮುಂದುವರಿಯಬೇಕೆಂದಿದ್ದಾರೆ.