ಕುಶಾಲನಗರ, ಸೆ 22: ಯಾವದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದಲ್ಲಿ ಅದೃಷ್ಟದೊಂದಿಗೆ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿ ಅನೂಪ್ ಮಾದಪ್ಪ ಹೇಳಿದರು.

ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ‘ಕೆಎ.12 ಪೊಲೀಸ್’ ಮತ್ತು ‘ಕ್ಷಣ ಕ್ಷಣ’ ಕಿರುಚಿತ್ರಗಳ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಿಡಿ ಅನಾವರಣಗೊಳಿಸಿ ಮಾತನಾಡಿದರು. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. ಶ್ರೀ ಶಬರೀಶ ಕ್ರಿಯೇಷನ್ಸ್ ವತಿಯಿಂದ ಟಿ.ಆರ್. ಪ್ರಭುದೇವ್ ಕಲ್ಪನೆಯಲ್ಲಿ ಮೂಡಿಬಂದಿರುವ ಕಿರುಚಿತ್ರಗಳ ಯಶಸ್ಸಿಗೆ ಅವರು ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವೃತ್ತಿ ಬದುಕಿನ ನಡುವೆ ಅಪಸ್ವರ ಬಂದಾಗ ಎದೆಗುಂದದೆ ಸವಾಲು ಎದುರಿಸಬೇಕೆಂದರು.

ಅತಿಥಿಗಳಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಉದ್ಯಮಿ

ಉಮಾಶಂಕರ್, ಚಲನಚಿತ್ರ ನಟಿ ಸಿಂಚನಾ ಚಂದ್ರಮೋಹನ್ ಮಾತನಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ನಿರ್ಮಾಪಕ ಎನ್. ಮೋಹನ್ ಕುಮಾರ್, ನಿರ್ದೇಶಕ ಗಯಾಜ್ ಕುಶಾಲ್, ಕಲಾವಿದರಾದ ವಿನು ಚಕ್ರವರ್ತಿ, ಸಜೀವ್, ಹರಿಗಿರಿ, ಅನಿಲ್, ಜಿ.ಎಲ್.ನಾಗರಾಜ್, ಲೋಕೇಶ್, ಸಂತೋಷ್, ಕಿಶೋರ್, ಟಿ.ಆರ್. ಪ್ರದೀಪ್, ಚೇತನ್, ಉದ್ಯಮಿಗಳಾದ ರಂಗಸ್ವಾಮಿ ಗೌಡ, ಬಬೀಂದ್ರ ಪ್ರಸಾದ್ ಮತ್ತು ಕಲಾವಿದರ ತಂಡದ ಸದಸ್ಯರು, ಪ್ರಮುಖರು ಇದ್ದರು.