ಮಡಿಕೇರಿ, ಸೆ. 20: ವರ್ಷಂಪ್ರತಿ ಒಂದಲ್ಲೊಂದು ವಿಶೇಷತೆಯಿಂದ, ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿರುವ ಕೆಎಸ್‍ಆರ್‍ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಈ ಬಾರಿ ಸರಳವಾಗಿ, ಸಾಂಪ್ರದಾಯಿಕವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಉತ್ಸವದ ಅಂಗವಾಗಿ ತಾ. 19 ರಂದು ರಂಗಪೂಜೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾಗಿರುವವರ ಪರವಾಗಿ ಸಂಕಲ್ಪ ಮಾಡುವದರೊಂದಿಗೆ ಪೂಜೆ ಆರಂಭಿಸಲಾಯಿತು. ನಂತರ ಸಂಕಲ್ಪ ಮಾಡಿಕೊಂಡವರಿಂದ ಪೂಜೆ ನೆರವೇರಿತು. ಸಂತ್ರಸ್ತರಿಗೆ ಮಿಡಿದ ಸಂಘದ ವತಿಯಿಂದ ಪ್ರಕೃತಿ ವಿಕೋಪದಲ್ಲಿ ನಷ್ಟಕ್ಕೊಳಗಾದ ಸಂಘದ ಸದಸ್ಯರುಗಳಿಗೆ ನೆರವನ್ನು ನೀಡಲಾಯಿತು.

ಇಂದು ಶೋಭಾ ಯಾತ್ರೆ

ಉತ್ಸವ ಮೂರ್ತಿಯ ಶೋಭಾ ಯಾತ್ರೆ ಹಾಗೂ ವಿಸರ್ಜನೋತ್ಸವ ತಾ. 21 ರಂದು (ಇಂದು) ಸಂಜೆ 5 ಗಂಟೆಗೆ ನಡೆಯಲಿದೆ. ಸಾಂಪ್ರದಾಯಿಕವಾಗಿ ಸರಳ ಮಂಟಪದಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ತೆರಳಿ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುವದು.