ಮಡಿಕೇರಿ, ಸೆ.20 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ಆರೋಗ್ಯ ಸಂರಕ್ಷಣೆಯ ಉದ್ದೇಶದಿಂದ ತಾ.23 ರಂದು ನಗರದ ಮಹದೇವಪೇಟೆಯಲ್ಲಿರುವ ಎ.ಎಲ್.ಜಿ. ಕ್ರೆಸೆಂಟ್ ಶಾಲಾ ಕ್ಯಾಂಪಸ್‍ನಲ್ಲಿ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಉಚಿತ ವೈದ್ಯಕೀಯ ಮಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಲಯದ ಜಮಾಅತೇ ಇಸ್ಲಾಮಿ ಹಿಂದ್‍ನ ಸಂಚಾಲಕರಾದ ಯು.ಅಬ್ದುಸಲಾಂ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ರಿಲೀಫ್ ಸೆಲ್, ಮಡಿಕೇರಿಯ ಪ್ರಬುದ್ಧ ನೌಕರರ ಒಕ್ಕೂಟ, ಮಡಿಕೇರಿ ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿ ಮತ್ತು ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಲಿದೆಯೆಂದು ತಿಳಿಸಿದರು.

ಅಂದು ಬೆಳಗ್ಗೆ 8.30 ಕ್ಕೆ ಶಿಬಿರ ಆರಂಭಗೊಳ್ಳಲಿದ್ದು, ಸಂಜೆಯವರೆಗೆ ನಡೆಯಲಿದೆ. ಬೆಳಗ್ಗಿನಿಂದ ಮಧ್ಯಾಹ್ನ 1 ಗಂಟೆÀಯವರೆಗೆ ನೋಂದಣಿ ಕಾರ್ಯದೊಂದಿಗೆ ಆರೋಗ್ಯ ತಪಾಸಣೆಯೂ ನಡೆಯಲಿದೆಯೆಂದು ಮಾಹಿತಿ ನೀಡಿದರು. ಶಿಬಿರದಲ್ಲಿ ಜನರಲ್ ಮೆಡಿಸಿನ್ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಕಿವಿ-ಮೂಗು, ಗಂಟಲು ರೋಗ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಸ್ತ್ರೀ ರೋಗ ವಿಭಾಗ ಹಾಗೂ ಮೂಳೆ ಮತ್ತು ಕೀಲು ವಿಭಾಗಗಳನ್ನು ತೆರೆಯುವ ಮೂಲಕ ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಮಾಡಲಾಗುತ್ತದೆಂದು ತಿಳಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪನ್ನೇಕರ್, ಪೊಲೀಸ್ ಉಪ ಅಧೀಕ್ಷÀಕ ಕೆ.ಎಸ್. ಸುಂದರ್‍ರಾಜ್ ಭಾಗವಹಿಸಲಿದ್ದು, ಮಂಗಳೂರು ವಲಯ ಜಮಾಅತೆ ಇಸ್ಲಾಮೀ ಹಿಂದ್‍ನ ಸಂಚಾಲಕರಾದ ಅಬ್ದುಸಲಾಮ್ ಯು. ಸಮಾರೋಪ ನುಡಿಗಳನ್ನಾಡಲಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಶಿಬಿರದಲ್ಲಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯ ಚಿಕಿತ್ಸಾ ಕಾರ್ಡ್‍ಗಳನ್ನು ನೀಡಲಾಗುವದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ಮಡಿಕೇರಿ ಕ್ರೆÉಸೆಂಟ್ ಸ್ಕೂಲ್‍ನ ಆಡಳಿತ ಮಂಡಳಿ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಗೂ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎ.ಪಿ. ಶಶಿಧÀರ್ ಉಪಸ್ಥಿತರಿದ್ದರು.