ಮಡಿಕೇರಿ, ಸೆ.20 : ದಕ್ಷಿಣ ಕೊಡಗಿನ ಅಮ್ಮತ್ತಿ ಹೋಬಳಿಯಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಆದಿವಾಸಿಗಳಿಗೆ ಮಂಜೂರಾಗಿದ್ದ ನಿವೇಶನಗಳನ್ನು ಉಳ್ಳವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಾಗವನ್ನು ಮುಂದಿನ 15 ದಿನಗಳ ಒಳಗಾಗಿ ತೆರವುಗೊಳಿಸಿ ಅರ್ಹ ಫಲಾನುಭವಿಗಳಿಗೆ ಮರಳಿ ನೀಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್ ಅಮ್ಮತ್ತಿ ಹೋಬಳಿಯ ಬಿಳುಗುಂದ ಗ್ರಾಮ ಪಮಚಾಯ್ತಿಯ ನಲ್ವತ್ತೊಕ್ಲು ಗ್ರಾಮದ ಸರ್ವೇ ನಂ.69 ರಲ್ಲಿ ಎರವ ಜನಾಂಗದ 8 ಕುಟುಂಬಗಳಿಗೆ 1991 ರಲ್ಲಿ ಆಶ್ರಯ ಯೋಜನೆಯಡಿ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ, ಈ ಜಾಗವನ್ನು ಅಲ್ಲಿನ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ದುರ್ಬಲ ವರ್ಗದ ಮಂದಿ ಮನೆ ಕಟ್ಟಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೂಲಿ ಕಾರ್ಮಿಕರಾಗಿರುವ ಈ ಕುಟುಂಬಗಳು ಭೂ ಹೀನರಾಗಿದ್ದು, ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡು ಕೂಲಿ ಕೆಲಸದೊಂದಿಗೆ ಜೀವನ ನಿರ್ವಹಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಇದು ಕೇವಲ ನಲ್ವತ್ತೊಕ್ಲು ಗ್ರಾಮಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಬದಲಾಗಿ ಕೊಡಗು ಜಿಲ್ಲೆಯಾದ್ಯಂತ ಇಂತಹ ಪರಿಸ್ಥಿತಿ ಇದ್ದು, ಪರಿಶಿಷ್ಟ ಪಂಗಡದ ಜನತೆ ಮನೆ ನಿವೇಶನಗಳಿಲ್ಲದೆ, ಸರಕಾರದ ಸೌಲಭ್ಯಗಳಿಂದಲೂ ವಂಚಿತರಾಗಿ ದ್ದಾರೆ. ಕೊಡಗಿನ ಹೊರ ಭಾಗದಲ್ಲಿ ಪ್ರತಿ ಕುಟುಂಬಗಳು ನಿವೇಶನ, ಮನೆಗಳನ್ನು ಹೊಂದಿದ್ದರು ಕೊಡಗಿನ ಆದಿವಾಸಿಗಳ ಬಗ್ಗೆ ಯಾವದೇ ಸರ್ಕಾರಗಳು ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಗಣೇಶ್ ದೂರಿದರು.

ಫಲಾನುಭವಿ ಸುಬ್ರಮಣಿ ಮಾತನಾಡಿ, ತಮಗೆ ಮಂಜೂ ರಾಗಿರುವ ಜಾಗವನ್ನು ಗ್ರಾಮದ ಮೂರು ಕುಟುಂಬಗಳ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿ ದ್ದಾರೆ. ಸ್ಮಶಾನದ ಅರ್ಧಕ್ಕೂ ಹೆಚ್ಚಿನ ಜಾಗವನ್ನು ಅವರುಗಳ ಮನೆಗೆ ರಸ್ತೆ ನಿರ್ಮಾಣಕ್ಕಾಗಿ ಕಬಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಮಂಜೂರಾಗಿ ರುವ ಜಾಗವನ್ನು ತಕ್ಷಣ ಮರು ಸರ್ವೇ ಮಾಡಿ ಮರಳಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಫಲಾನುಭವಿಗಳಾದ ಪವಿತ್ರಾ, ಮುತ್ತ, ಪಾರು ಹಾಗೂ ತಿಮ್ಮ ಉಪಸ್ಥಿತರಿದ್ದರು.