ಮಡಿಕೇರಿ, ಸೆ. 20: ಮಡಿಕೇರಿ ನಗರದಲ್ಲಿ ಯುಜಿಡಿ ಕಾಮಗಾರಿ ನಡೆದು 6 ತಿಂಗಳು ಕಳೆದರೂ, ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದ್ದ ರಸ್ತೆಯನ್ನು ಸರಿಪಡಿಸದೇ ಇರುವ ಬಗ್ಗೆ ಕೊಹಿನೂರು ರಸ್ತೆಯ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಇಂದು ದಿಢೀರ್ ರಸ್ತೆ ತಡೆ ಮಾಡುವದರ ಮೂಲಕ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೈಗಾರಿಕಾ ಕೇಂದ್ರ ಕಚೇರಿಯ ಮುಂಭಾಗದ ವೃತ್ತದಲ್ಲಿ ಜಮಾಯಿಸಿದ ನಿವಾಸಿಗಳು, ಯುಜಿಡಿ ಕಳಪೆ ಕಾಮಗಾರಿ ಹಾಗೂ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಟ್ಟು ನಿಂತ ರಸ್ತೆಯಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಶಾಲಾ ವಿದ್ಯಾರ್ಥಿಗಳು ನಡೆದಾಡುವದಕ್ಕೂ ಅಡಚಣೆ ಎದುರಾಗಿದ್ದು, ಮಳೆಗಾಲದಲ್ಲಿ ಕೆಸರಿನ ಓಕುಳಿ ಹಾಗೂ ಬೇಸಿಗೆಯಲ್ಲಿ ಧೂಳಿನ ಅಭಿಷೇಕ ಅನುಭವಿಸುವ ದುಸ್ಥಿತಿ ಸ್ಥಳೀಯ ನಿವಾಸಿಗಳದ್ದಾಗಿದೆ ಎಂದು ವರ್ತಕರ ಪರವಾಗಿ ಮಾತನಾಡಿದ ಬಿ.ಕೆ. ಅರುಣ್ ಅಸಮಾಧಾನ ಹೊರಗೆಡವಿದರು. ಶೀಘ್ರದಲ್ಲೇ ರಸ್ತೆ ದುರಸ್ತಿಯನ್ನು ಕೈಗೊಂಡು ಸಂಚಾರ ಯೋಗ್ಯವನ್ನಾಗಿಸದೇ ಹೋದಲ್ಲಿ ತೀವ್ರ ತರದ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಗರ ಸಭಾ ಆಯುಕ್ತ ರಮೇಶ್ ಅವರಿಗೆ ಪ್ರತಿಭಟನಕಾರರು ಮನವಿಯನ್ನು ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕನ್ನಂಡ ಸಂಪತ್, ಟೌನ್‍ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್, ಸುಬ್ರಮಣಿ, ಕನ್ನಿಕ, ಅರುಣ್ ಶೆಟ್ಟಿ ಮುಂತಾದವರು ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆರಂಭದ ಕೆಲವು ನಿಮಿಷಗಳ ಕಾಲ ಈ ವೃತ್ತದಲ್ಲಿ ಸಂಪೂರ್ಣ ರಸ್ತೆ ತಡೆ ನಡೆಯಿಂತಾದರೂ ಪೊಲೀಸರ ಮಧ್ಯಪ್ರವೇಶದ ಬಳಿಕ ವಾಹನ ಸಂಚಾರಕ್ಕೆ ಎಡೆಮಾಡಿ ಕೊಡಲಾಯಿತು.

ರಸ್ತೆ ದುರಸ್ತಿಗೆ ತೀರ್ಮಾನಿಸಲಾಗಿದೆ

ಮಡಿಕೇರಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳೊಂದಿಗೆ, ಒಳಚರಂಡಿ ವ್ಯವಸ್ಥೆಯಿಂದ ಹಾನಿಗೊಂಡಿರುವ ಮಾರ್ಗದ ಕೆಲಸವನ್ನು ಇನ್ನೆರಡು ದಿನಗಳಲ್ಲಿ ಮುಂದುವರಿಸಲಾಗುವದು ಎಂದು ನಗರಸಭಾ ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರುಗಳು, ಈಗಾಗಲೇ ದಸರಾ ಮುಂಚಿತವಾಗಿ ರಸ್ತೆ ರಿಪೇರಿಗೆ ನಗರಸಭೆ ತೀರ್ಮಾನ ಕೈಗೊಂಡಿದ್ದು, ಮೊಹರಂ ಹಬ್ಬದ ಬಳಿಕ ಕೆಲಸ ನಡೆಸುವದಾಗಿ ಒಳಚರಂಡಿ ವಿಭಾಗ ಇಂಜಿನಿಯರ್ ಭರವಸೆ ನೀಡಿದ್ದಾರೆಂದು ಸ್ಪಷ್ಟ ಪಡಿಸಿದ್ದಾರೆ. ಈ ದಿಸೆಯಲ್ಲಿ ನಗರಸಭೆಯಿಂದ ಸರ್ವ ಸದಸ್ಯರ ಸಭೆ ತೀರ್ಮಾನ ದೊಂದಿಗೆ, ಜಿಲ್ಲಾಧಿಕಾರಿಗಳು ಮಳೆ ವಿಕೋಪ ನಿಧಿ ಒದಗಿಸುವ ಭರವಸೆ ನೀಡಿರುವದಾಗಿಯೂ ಅವರುಗಳು ಸಮಜಾಯಿಷಿಕೆ ನೀಡಿದ್ದಾರೆ.