ಕುಶಾಲನಗರ, ಸೆ. 20: ಮಂಗಳವಾರ ರಾತ್ರಿ ವೇಳೆ ವಾಲ್ಮೀಕಿ ಭವನದ ಸಾಂತ್ವನ ಕೇಂದ್ರದಲ್ಲಿ ನಡೆದ ಘಟನೆ ಬೆನ್ನಲ್ಲೇ ಪೊಲೀಸ್ ಇಲಾಖೆ ಸಂತ್ರಸ್ತರಿಗೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಕಲ್ಪಿಸಿದೆ. ಈ ನಡುವೆ ಸಾಂತ್ವನ ಕೇಂದ್ರದ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕ ಫಿಲಿಪ್ವಾಸ್ ಅವರು ತಮ್ಮ ಕರ್ತವ್ಯದಿಂದ ಬಿಡುಗಡೆಗೊಂಡಿದ್ದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ಪ್ರಸಕ್ತ ವಾಲ್ಮೀಕಿ ಭವನದ ಸಾಂತ್ವನ ಕೇಂದ್ರದಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂತ್ರಸ್ತರಾದ 104 ಕುಟುಂಬಗಳ 267 ಮಂದಿ ಸದಸ್ಯರು ಆಶ್ರಯ ಪಡೆದಿದ್ದಾರೆ. ಕುಶಾಲನಗರ ಸಾಂತ್ವನ ಕೇಂದ್ರದಲ್ಲಿ ತಮಗೆ ಸಮರ್ಪಕವಾಗಿ ವ್ಯವಸ್ಥೆ ಸಿಗುತ್ತಿಲ್ಲ ಎನ್ನುವ ಸಂತ್ರಸ್ತರ ದೂರಿನ ಹಿನ್ನಲೆಯಲ್ಲಿ ಎಲ್ಲಾ ಸಂತ್ರಸ್ತರನ್ನು ಮಡಿಕೇರಿಯ ಸಾಂತ್ವನ ಕೇಂದ್ರಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಚಿಂತನೆ ಹರಿಸಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಸಾಂತ್ವನ ಕೇಂದ್ರಗಳಲ್ಲಿ ಎಲ್ಲೆಡೆ ಸಮರ್ಪಕ ವ್ಯವಸ್ಥೆ ಒದಗಿಸಲಾಗಿದ್ದರೂ ಕುಶಾಲನಗರ ಕೇಂದ್ರದಲ್ಲಿ ಅಸಮರ್ಪಕ ಸೇವೆ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ದಿನಾಂಕ 18 ರಂದು ರಾತ್ರಿ ಕುಶಾಲನಗರ ವಾಲ್ಮೀಕಿ ಕೇಂದ್ರದಲ್ಲಿ ಸಂತ್ರಸ್ತರ ಕೆಲವು ಬೇಡಿಕೆ ಹಿನ್ನೆಲೆಯಲ್ಲಿ ಸ್ಥಳೀಯ ನೋಡಲ್ ಅಧಿಕಾರಿ ಫಿಲಿಪ್ವಾಸ್ ಮನವಿ ಮೇರೆಗೆ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಮಹೇಶ್ ನೇತೃತ್ವದಲ್ಲಿ ರಾತ್ರಿ 10 ಗಂಟೆಯಿಂದ ಕುಶಾಲನಗರ ನಾಡಕಛೇರಿಯ ಕಂದಾಯ ನಿರೀಕ್ಷಕರಾದ ಮಧು, ಗ್ರಾಮ ಲೆಕ್ಕಿಗರಾದ ಗುರು, ಫೀರ್ ಮಹಮ್ಮದ್, ಸಹಾಯಕ ನೋಡಲ್ ಅಧಿಕಾರಿ ಸಂಪತ್ ತಂಡದ ಸದಸ್ಯರೊಂದಿಗೆ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತರ ಎಣಿಕೆ ಕಾರ್ಯಕ್ಕೆ ತೊಡಗಿದ್ದಾರೆ. ಕೇಂದ್ರದಲ್ಲಿ 287 ಸಂತ್ರಸ್ತರ ಸಂಖ್ಯೆ ನೋಂದಣಿಯಾಗಿದ್ದು 267 ಮಂದಿಯ ನಿಖರ ಸಂಖ್ಯೆ ಮಾತ್ರ ದೊರಕಿದ್ದು ಉಳಿದಂತೆ 20 ಮಂದಿ ನಾಪತ್ತೆಯಾಗಿರುವ ಬಗ್ಗೆ ಎಣಿಕೆ ಕಾರ್ಯ ನಡೆದಿತ್ತು. ಸಂತ್ರಸ್ತರಿಗೆ ಬಸ್ ಪಾಸ್ ಕಲ್ಪಿಸಲು ಗುರುತಿನ ಚೀಟಿಗಾಗಿ 267 ಮಂದಿ ಮಾತ್ರ ಭಾವಚಿತ್ರ ತೆಗೆದುಕೊಂಡಿದ್ದರು. ಉಳಿದಂತೆ 20 ಮಂದಿಯ ವ್ಯತ್ಯಾಸ ಪತ್ತೆಹಚ್ಚಲು ಎಣಿಕೆ ಕಾರ್ಯ ನಡೆದಿತ್ತು ಎನ್ನಲಾಗಿದೆ.
ಈ ಸಂದರ್ಭ ವಾಲ್ಮೀಕಿ ಭವನದಲ್ಲಿ ನೆಲೆಸಿರುವ ಕೆಲವು ಸಂತ್ರಸ್ತರ ನಡುವೆ ನಡೆದ ವಾಗ್ವಾದ ಮತ್ತು ಗೊಂದಲದಲ್ಲಿ ತಹಶೀಲ್ದಾರರು ಸೇರಿದಂತೆ ಇಬ್ಬರು ಸಂತ್ರಸ್ತರ ನಡುವೆ ಹಲ್ಲೆ ನಡೆದಿರುವದಾಗಿ ಆರೋಪ ವ್ಯಕ್ತಗೊಂಡಿದೆ.
ಎಸ್.ಪಿ. ಭೇಟಿ
ಘಟನೆ ಹಿನ್ನೆಲೆ ಇಂದು ಪೊಲೀಸ್ ವರಿಷ್ಠಾಧಿಕಾರಿ ಸುಮನ ಅವರು ಠಾಣೆಗೆ ಭೇಟಿ ನೀಡಿ ದಾಖಲೆ ಸಹಿತ ಮಾಹಿತಿ ಪಡೆದರು. ನಿರಾಶ್ರಿತ ಕೇಂದ್ರದ ನೋಡಲ್ ಅಧಿಕಾರಿಯಿಂದಲೂ ಮಾಹಿತಿ ಕಲೆ ಹಾಕಿದರು. ಉಪವಿಭಾಗಾಧಿಕಾರಿ ಜವರೇಗೌಡ ಅವರೂ ಕೂಡ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.