ಸೋಮವಾರಪೇಟೆ, ಸೆ. 19: ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತಗೊಂಡು ಸಂಪರ್ಕ ಕಡಿದುಕೊಂಡಿರುವ ಹಾನಗಲ್ಲು-ದುದ್ದುಗಲ್ಲು-ಕಿರಗಂದೂರು ರಸ್ತೆ ಕಾಮಗಾರಿ ಇಂದಿಗೂ ಪ್ರಾರಂಭವಾಗಿಲ್ಲ.
ದಿನಕ್ಕೊಬ್ಬರಂತೆ ಇಂಜಿನಿಯರ್‍ಗಳು ಬಂದು ಹೊಸ ಹೊಸ ‘ಐಡಿಯಾ’ ಕೊಡುತ್ತಿರುವದನ್ನು ಬಿಟ್ಟರೆ ಸ್ಥಳದಲ್ಲಿ ಯಾವದೇ ಪ್ರಗತಿ ಕಾಣಬರುತ್ತಿಲ್ಲ. ಕಳೆದ ಆಗಸ್ಟ್ 17ರಂದು ಹಾನಗಲ್ಲು-ದುದ್ದುಗಲ್ಲು ರಸ್ತೆ ಕುಸಿತಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು, ಹೊಟೇಲ್, ಅಂಗಡಿಗಳಿಗೆ ದುದ್ದುಗಲ್ಲು ಹೊಳೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ರಸ್ತೆಯ ಪಕ್ಕದಲ್ಲೇ ಮೋಟಾರ್ ರೂಂ ಅಳವಡಿಸಲಾಗಿದೆ. ಈ ಕಟ್ಟಡದಿಂದ ಕೆಲ ಮೀಟರ್ ದೂರದಲ್ಲಿ ರಸ್ತೆಯ ಎಡಭಾಗ ಕುಸಿತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ.
ಇದರೊಂದಿಗೆ ದುದ್ದುಗಲ್ಲು ರಸ್ತೆಯ ಇನ್ನೂ 2 ಸ್ಥಳದಲ್ಲಿ ರಸ್ತೆ ಕುಸಿದಿದ್ದು, ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿದೆ. ದುದ್ದುಗಲ್ಲು ಮೂಲಕ ತಾಕೇರಿ, ಕಿರಗಂದೂರು ಗ್ರಾಮಗಳಿಗೆ ಈ ರಸ್ತೆ ಹತ್ತಿರವಾಗಿದ್ದು, ಇಂದಿಗೂ ದುರಸ್ತಿ ಕಾಮಗಾರಿ ಪ್ರಾರಂಭವಾಗದ ಹಿನ್ನೆಲೆ ಬಳಸು ದಾರಿಯಲ್ಲಿ ತೆರಳಬೇಕಾಗಿದೆ.
ಪ್ರಾರಂಭದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಎಂ.ಸ್ಯಾಂಡ್ ಹಾಕಿ, ಅದರಲ್ಲಿಯೇ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತನೆ ಹರಿಸಿ, ಸ್ಥಳದಲ್ಲಿ ನೂರಾರು ಚೀಲ ಎಂ.ಸ್ಯಾಂಡ್ ದಾಸ್ತಾನಿರಿಸಲಾಗಿದೆ. ನಂತರ ಬಂದ ಅಭಿಯಂತರರು ಇಲ್ಲಿ ಎಂ.ಸ್ಯಾಂಡ್‍ನಿಂದ ನಿರ್ಮಿಸುವದು ಬೇಡ, ಸಿಮೆಂಟ್‍ನಿಂದಲೇ ತಡೆಗೋಡೆ ನಿರ್ಮಿಸುವ ಎಂದು ಸಲಹೆ ನೀಡಿದ್ದಾರೆ. ಆದರೆ ಸಿಮೆಂಟ್‍ನಿಂದ ತಡೆಗೋಡೆ ನಿರ್ಮಿಸುವ ಕಾಮಗಾರಿಯೂ ಸಹ ಪ್ರಾರಂಭವಾಗಿಲ್ಲ.
ಶಾಸಕರಿಂದ ಪರಿಶೀಲನೆ: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಕುಸಿತಕ್ಕೆ ಒಳಗಾಗಿ ಸಂಪರ್ಕ ಕಡಿದುಕೊಂಡಿರುವ ದುದ್ದುಗಲ್ಲು ರಸ್ತೆಯನ್ನು ಪರಿಶೀಲಿಸಿದರು. ತಕ್ಷಣ ಕಾಮಗಾರಿ ಪ್ರಾರಂಭಿಸಲು ಸಂಬಂಧಿಸಿದ ಅಭಿಯಂತರರಿಗೆ ಸೂಚಿಸುವದಾಗಿ ಶಾಸಕರು ತಿಳಿಸಿದರು.
ರಸ್ತೆ ಕಾಮಗಾರಿಗೆ ಅಗತ್ಯವಾಗಿದ್ದ ಮ್ಯಾಟ್ ಬಂದಿರಲಿಲ್ಲ. ಇದೀಗ ಮ್ಯಾಟ್ ತರಿಸಲಾಗಿದ್ದು, ಸ್ಯಾಂಡ್ ಬ್ಯಾಗ್ ಸಿದ್ಧವಿದೆ. ರಸ್ತೆ ನಿರ್ಮಾಣಕ್ಕೆ ಒಂದು ಮರವನ್ನು ತೆರವುಗೊಳಿಸಬೇಕಿದ್ದು, ಮುಂದಿನ ಮೂರು ದಿನದ ಒಳಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವದಾಗಿ ವೆಂಕಟೇಶ್ ನಾಯಕ್ ಭರವಸೆ ವ್ಯಕ್ತಪಡಿಸಿದ್ದಾರೆ.