ಮಡಿಕೇರಿ, ಸೆ. 19: ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿರುವ ಕೊಡಗು ಸೌಹಾರ್ದ ಸಹಕಾರ ಸಂಸ್ಥೆಯ ಮಹಾಸಭೆ ತಾ. 15 ರಂದು ಕೊಡವ ಸಮಾಜದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಹಕಾರಿಯ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಸಂಸ್ಥೆ 1920 ಸದಸ್ಯರನ್ನೊಳಗೊಂಡಂತೆ ರೂ. 56 - 59 ಲಕ್ಷದಷ್ಟು ಪಾಲು ಹಣ ಹೊಂದಿದ್ದು, ಮರಣ ನಿಧಿಯಲ್ಲಿ 972 ಸದಸ್ಯರಿದ್ದಾರೆ. ಮೃತರ ಸದಸ್ಯರ ನಾಮಿನಿಗೆ ರೂ. 10 ಸಾವಿರದಷ್ಟು ಮರಣೋತ್ತರ ಸಹಾಯಧನ ಸೌಲಭ್ಯವನ್ನು ನೀಡುತ್ತಿದೆ. ನಿರಖು ಠೇವಣಿ ಮತ್ತು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದೆ. ಹಾಗೆಯೇ ಸಹಕಾರಿಯ ಮುಖಾಂತರ ಜಾಮೀನು ಸಾಲ, ಆಭರಣ ಸಾಲ, ಠೇವಣಿ ಆಧಾರ ಸಾಲ ಮತ್ತು ಗೃಹ ನಿರ್ಮಾಣ ಸಾಲ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಸಹಕಾರಿಯು ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 12.32 ಲಕ್ಷಗಳ ಲಾಭಗಳಿಸಿದ್ದು, ಶೇ. 9 ರಂತೆ ಡಿವಿಡೆಂಡ್‍ಅನ್ನು ಘೋಷಿಸಲಾಗಿದೆ. ಸದರಿ ಡಿವಿಡೆಂಡನ್ನು ಕೊಡಗಿನ ಪ್ರಕೃತಿ ವಿಕೋಪದ ಸಂತ್ರಸ್ತ ಸದಸ್ಯರುಗಳಿಗೆ ಸಹಾಯಹಸ್ತ ನೀಡಲು ಸ್ಪಂದಿಸುವಂತೆ ಸಭೆಯನ್ನು ಕೇಳಿಕೊಂಡ ಮೇರೆ ಮಹಾಸಭೆಯು ಈ ಮೊಬಲಗನ್ನು ಸಹಕಾರಿಯಲ್ಲಿಯೇ ಒಂದು ಪ್ರಕೃತಿ ವಿಕೋಪ ಸಂತ್ರಸ್ತ ನಿಧಿಯನ್ನು ಸ್ಥಾಪಿಸಿ ಸಂತ್ರಸ್ತ ಸದಸ್ಯರುಗಳಿಗೆ ಪ್ರಯೋಜನ ವಾಗುವಂತೆ ಉಪಯೋಗಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿತು. ಅಲ್ಲದೆ ಸಹಕಾರಿಯ ಲಾಭದ ಹಂಚಿಕೆಯಲ್ಲಿನ ಸಾಮಾನ್ಯ ಕ್ಷೇಮ ನಿಧಿಯಿಂದ ಸದಸ್ಯರುಗಳ ವೈದ್ಯಕೀಯ ವೆಚ್ಚಕ್ಕಾಗಿ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗೆ ಬಹುಮಾನ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರುಗಳಿಗೆ ಪ್ರೋತ್ಸಾಹಧನ ನೀಡಲು ರೂಪಿಸಿರುವ ನಿಯಮವನ್ನು ಮಹಾಸಭೆಯಲ್ಲಿ ಒಪ್ಪಲಾಯಿತು.

ಸಹಕಾರಿಯ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಿದಂತೆ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಸಲಹೆ ನೀಡಿ, ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಯುಂಟಾದ ಹಿನ್ನೆಲೆ ಹಾಗೂ ಸಹಕಾರಿಯಲ್ಲಿನ ವ್ಯವಹಾರ ಸದಸ್ಯರುಗಳ ಠೇವಣಿಯಿಂದ ನಡೆಯುತ್ತಿರುವದರಿಂದಲೂ ಮತ್ತು ಸಹಕಾರಿಯ ಅಭಿವೃದ್ಧಿ ದೃಷ್ಟಿ ಯಿಂದಲೂ ಸದಸ್ಯರುಗಳ ಸಾಲದ ಮರುಪಾವತಿಯನ್ನು ಆರ್ಥಿಕವಾಗಿ ಅರ್ಹತೆಯಿರುವ ಸದಸ್ಯರುಗಳು ಅಸಲು ಮತ್ತು ಬಡ್ಡಿಯನ್ನು ಪಾವತಿಸಿ ಸಹಕರಿಸುವಂತೆಯೂ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸದಸ್ಯರುಗಳು ಬಡ್ಡಿ ಪಾವತಿಸಿ ಅಸಲನ್ನು ಒಂದು ವರ್ಷದ ಮಟ್ಟಿಗೆ ನವೀಕರಿಸುವಂತೆಯೂ ಹಾಗೂ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾದವರ ಸಾಲದ ಮರುಪಾವತಿ ಬಗ್ಗೆ ಸ್ಥಾಪಿಸಿರುವ ಪ್ರಕೃತಿ ವಿಕೋಪ ನಿಧಿಯಿಂದ ವಿನಿಯೋಗಿಸಲು ಆಡಳಿತ ಮಂಡಳಿಯ ವಿವೇಚನೆಗೆ ಬಿಡುವಂತೆ ನೀಡಿದ ಸಲಹೆಗೆ ಮಹಾಸಭೆಯಲ್ಲಿ ಒಪ್ಪಿಗೆ ನೀಡಿತು.

ಸದಸ್ಯರುಗಳ, ಆಡಳಿತ ಮಂಡಳಿಯವರ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಮತ್ತು ಸಹಕಾರದೊಂದಿಗೆ ಉತ್ತಮ ಕಾರ್ಯನಿರ್ವಹಿಸುತ್ತಿರುವದಕ್ಕೆ 2017-18ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪ್ರಥಮ ಬಹುಮಾನದ ಪ್ರಶಸ್ತಿಗೆ ಭಾಜನರಾಗಿರುವದನ್ನು ಅಧ್ಯಕ್ಷರು ಸಭೆಗೆ ತಿಳಿಸಿದರು.

ಸಹಕಾರಿಯ ಮೃತಪಟ್ಟ ಸದಸ್ಯರುಗಳಿಗೆ ಪ್ರಕೃತಿ ವಿಕೋಪದಿಂದ ಮೃತಪಟ್ಟವರುಗಳಿಗೂ, ದೇಶದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಪೇರಿಯಂಡ ಪಿ. ಪೆಮ್ಮಯ್ಯ, ಆಡಳಿತ ಮಂಡಳಿ ಹಾಗೂ ಕೊಡವ ಸಮಾಜದ ಅಧ್ಯಕ್ಷರು ಉಪಸ್ಥಿತರಿದ್ದರು.