ಶ್ರೀಮಂಗಲ, ಸೆ. 19: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1490 ಸದಸ್ಯರು ತಮ್ಮ ಮಹಾಸಭೆಯ ಭತ್ಯೆಯಾದ ತಲಾ ರೂ. 200ರಂತೆ ಒಟ್ಟು ರೂ. 2 ಲಕ್ಷ 98 ಸಾವಿರವನ್ನು ಮಹಾಮಳೆಗೆ ತತ್ತರಿಸಿದ ಕೊಡಗಿನ ಸಂತ್ರಸ್ತರಿಗೆ ನೀಡಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ 75ನೇ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಸಂಘವು 2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಎ ತರಗತಿಯನ್ನು ಹೊಂದಿದ್ದು ನಿವ್ವಳ ಲಾಭ ರೂ. 62,64,400 ಗಳಿಸಿದೆ. ಇದರಲ್ಲಿ ಸದಸ್ಯರಿಗೆ ಶೇ. 25ರಷ್ಟು ಶೇರು ಡಿವಿಡೆಂಡ್ ಮತ್ತು ನೌಕರರಿಗೆ 2 ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡಲು ಮಹಾಸಭೆ ಮಂಜೂರಾತಿ ಪಡೆಯಲಾಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ವಿವೇಕ್, ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ಸಂಘದ 50 ಎಕರೆ ಕಾಫಿ ತೋಟ ಮೂಲವಾಗಿದೆ. ಸದಸ್ಯರು ಹಾಗೂ ಸಾರ್ವಜನಿಕರು ಸಂಘದಲ್ಲಿ ಗೊಬ್ಬರ, ಪಡಿತರ ವಸ್ತು, ಹತ್ಯಾರು, ಬಟ್ಟೆ, ಕ್ರಿಮಿನಾಶಕ, ದಿನಬಳಕೆ ವಸ್ತು ಹಾಗೂ ಇತರ ವಸ್ತುಗಳ ವ್ಯಾಪಾರ ನಡೆಸುವದರಿಂದ ಮೂಲ ಆದಾಯ ಮತ್ತಷ್ಟು ಹೆಚ್ಚುವಂತಾಗಿದೆ. ಸದಸ್ಯರ ಅನುಕೂಲಕ್ಕೆ ವಿಜಯ ಬ್ಯಾಂಕ್‍ನ ಮುಖಾಂತರ ನೆಟ್ ಬ್ಯಾಂಕ್ ವ್ಯವಸ್ಥೆ, ಜಮೀನು ಆರ್‍ಟಿಸಿ ಶೇ. 8ರ ಬಡ್ಡಿದರದಲ್ಲಿ ಆಭರಣ ಸಾಲ, ಜಾಮೀನು ಹಾಗೂ ಪಿಗ್ಮಿ ಸಾಲ ನೀಡಲಾಗುತ್ತಿದೆ. ಇದರೊಂದಿಗೆ ಬೆಳೆ ವಿಮೆ ಕಂತು, ರಾಜ್ಯ ಸರ್ಕಾರದ ಯಶಸ್ವಿನಿ ವಿಮೆ ಮತ್ತು ಕೇಂದ್ರದ ಆಯುಷ್‍ಮಾನ್ ಭಾರತ ಯೋಜನೆ ಲಭ್ಯವಿದ್ದು ಸದಸ್ಯರು ಆಧಾರ್ ಮತ್ತು ಪಡಿತರ ಚೀಟಿ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಂದ ಆರೋಗ್ಯ ಕಾರ್ಡ್ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಪಿ.ಗಣಪತಿಯವರ ಶಿಫಾರಸ್ಸಿನ ಮೇರೆಗೆ ಅಪೆಕ್ಸ್ ಬ್ಯಾಂಕ್‍ನಿಂದ ಸಂಘಕ್ಕೆ ವ್ಯಾಪಾರಾಭಿವೃದ್ಧಿಗೆ 1ಲಕ್ಷ ಧನ ಸಹಾಯ ದೊರೆತಿದೆ. ಅಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋಣಿಕೊಪ್ಪ ಇದರ ಸದಸ್ಯರಾದ ಸುಜಾಪೂಣಚ್ಚ ಅವರು 150 ಮೆಟ್ರಿಕ್ ಟನ್ ಸಾಮಥ್ರ್ಯದ ಗೊಡೌನ್ ನಿರ್ಮಾಣದ ಭರವಸೆ ನೀಡಿರುವದನ್ನು ಸ್ಮರಿಸಿಕೊಂಡರು.
ವಾರ್ಷಿಕ ಮಹಾಸಭೆಗೆ ಸದಸ್ಯರು ಠರಾವು ಸಲ್ಲಿಸುವಾಗ ತಮ್ಮ ಸಹಿಯ ಕೆಳಗೆ ಹೆಸರು ನಮೂದಿಸಿದವರ ಠರಾವುಗಳನ್ನು ಮಾತ್ರ ಸ್ವೀಕರಿಸಲಾಗು ವದೆಂಬ ಮಾಹಿತಿಯನ್ನು ನೀಡಿದರು. ಸಂಘದಲ್ಲಿ 1490 ಸದಸ್ಯರಿದ್ದು, ಪಾಲು ಬಂಡವಾಳ 1,35,02,700 ಹಾಗೂ ನಿರಖು ಠೇವಣಿ, ಪಿಗ್ಮಿ ಠೇವಣಿ, ಸಿಬ್ಬಂದಿ ಠೇವಣಿ ಸೇರಿ 4,17,70,974ರೂ.ಗಳಿದ್ದು, ಸಂಘದಲ್ಲಿ ಕ್ಷೇಮ ನಿಧಿ 2,36,05,686 ರೂ. ಹಾಗೂ ಕಾಫಿ ತೋಟದ ಬಂಡವಾಳ ಅಭಿವೃದ್ಧಿ ನಿಧಿ 1.30 ಕೋಟಿ, ಕಟ್ಟಡ ಹಾಗೂ ಇತರ ನಿಧಿಗಳು 1,63,37,143 ಇದೆ ಎಂದು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಕೆ.ಆರ್. ಸುರೇಶ್ ವಂದಿಸಿದರು. ವಾರ್ಷಿಕ ಮಹಾಸಭೆಯಲ್ಲಿ 1490 ಸದಸ್ಯರ ಪೈಕಿ 1097 ಸದಸ್ಯರು ಹಾಜರಿದ್ದರು.