ಭಾಗಮಂಡಲ, ಸೆ. 19: ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘ ಭಾಗಮಂಡಲದ ಚುನಾವಣೆ ತಾ. 23 ರಂದು ನಿಗದಿಯಾಗಿದ್ದು, ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನಾಂಕವಾಗಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಮಡಿಕೇರಿ ಕ್ಷೇತ್ರಕ್ಕೆ ನಿಗದಿಯಾಗಿದ್ದ ಹತ್ತು ಸ್ಥಾನಗಳಿಗೆ 14 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಲ್ಕು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದರಿಂದ ಹತ್ತು ಮಂದಿ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ಕ್ಷೇತ್ರಕ್ಕೆ ನಿಗದಿಯಾಗಿದ್ದ 5 ನಿರ್ದೇಶಕರ ಸ್ಥಾನಕ್ಕೆ 3 ಮಂದಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಎರಡು ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದೆ. ಕಳೆದ ಮೂರು ಅವಧಿಯಲ್ಲಿ 15 ವರ್ಷ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸಂಘದ ಅಧಿಕಾರವನ್ನು ಹೊಂದಿದ್ದು ಈಗಲೂ ಅಧಿಕಾರ ಉಳಿಸಿಕೊಂಡಿದ್ದು ಮುಂದಿನ ಐದು ವರ್ಷಗಳು ಮತ್ತೆ ಅಧಿಕಾರ ನಡೆಸಲಿವೆ. ಸಂಘದ ಒಟ್ಟು ಹದಿನೈದು ಸ್ಥಾನಗಳಲ್ಲಿ ಈಗಾಗಲೇ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾದಂತಾಗಿದೆ.
ಮಡಿಕೇರಿ ತಾಲೂಕಿನಿಂದ ಹೊಸೂರು ಕೆ. ಸತೀಶ್ಕುಮಾರ್, ಪೊಡನೋಳನ ಸಿ. ವಿಠಲ, ಸೂರ್ತಲೆ ಎಂ. ಜನಾರ್ಧನ, ಕೆ.ಟಿ. ಜೀವನ್ಕುಮಾರ್, ಅಯ್ಯಣೀರ ಎಂ. ದಿನೇಶ್, ಕೆದಂಬಾಡಿ ಯು. ಮೋಹನ್, ಕುಸುಮ ಎಸ್.ಎನ್., ಪಾಣತ್ತಲೆ ಎ. ಲೋಕನಾಥ, ಎಸ್.ಎಂ. ಪ್ರಸನ್ನಕುಮಾರ್ ಹಾಗೂ ಕೋಡಿ ಯು. ಮೋಟಯ್ಯ, ಆಯ್ಕೆಯಾಗಿದ್ದರೆ, ಸೋಮವಾರಪೇಟೆ ತಾಲೂಕಿನಿಂದ ಕೆ.ಎನ್. ಉದಯಕುಮಾರ್, ಹೆಚ್.ಪಿ. ದಿನೇಶ್ ಹಾಗೂ ಹೆಚ್.ಡಿ. ಹೇಮಂತಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.