ಮಡಿಕೇರಿ, ಸೆ. 19: ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಶಾಶ್ವತ ಪÀÅನರ್ವಸತಿ ಕಲ್ಪಿಸುವದು ಹಾಗೂ ಹಾನಿಗೆ ಒಳಗಾದ ಪ್ರದೇಶಗಳ ಪÀÅನರ್‍ನಿರ್ಮಾಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ತಾ. 21 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಈ ಬಗ್ಗೆ ಮಾಹಿತಿ ನೀಡಿ, ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಅತಿವೃಷ್ಟಿಯ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ 7 ನಾಡುಗಳ ಸಂತ್ರಸ್ತರನ್ನು ಒಳಗೊಂಡಂತೆ ಸತ್ಯಾಗ್ರಹ ನಡೆಯಲಿದೆ. ಬಳಿಕ ಕೈಲ್ ಪೋದ್‍ನ ತಾ. 1 ಮತ್ತು 12 ರಂದು ಕೈಗೊಂಡ ಹಕ್ಕೊತ್ತಾಯಗಳ ಮನವಿಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿ ಅನುಷ್ಠಾನಕ್ಕೆ ಆಗ್ರಹಿಸಲಾಗುವದೆಂದರು.
ಕೊಡಗಿನ ಏಳು ನಾಡುಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಅಂತಾರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು, ಪ್ರಾಕೃತಿಕ ವಿಕೋಪಕ್ಕೆ ಕೊಡಗಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಾರಂಗಿ ಜಲಾಶಯವೇ ಕಾರಣ ವಾಗಿದ್ದು, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಆಯಾ ಪ್ರದೇಶಗಳಲ್ಲೇ ಪುನರ್ವಸತಿ ಕಲ್ಪಿಸುವ ಮುನ್ನ ಜಲಾಶಯವನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಾರ್ಯ ಪೂರ್ಣಗೊಳ್ಳುವವರೆಗೆ 10 ವರ್ಷಗಳ ಕಾಲ ಅವರ ಜೀವನ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾಥ ಪ್ರಜ್ಞೆ ಕಾಡದಂತೆ ಭರವಸೆ ಮೂಡಿಸುವ ಸಲುವಾಗಿ, ಸಂತ್ರಸ್ತರು ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆ ಮನೆಯ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್‍ನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತರ ಪುನರ್‍ವಸತಿಯನ್ನು ಅದೇ ಸ್ಥಳದಲ್ಲಿ ಮಾಡಬೇಕು, ಅದಕ್ಕಾಗಿ ಅವರು ಗೌರವಪೂರ್ಣ ಬದುಕು ಕಟ್ಟಿಕೊಳ್ಳಲು, 30 ಸಾವಿರ ಕೋಟಿ ಆರ್ಥಿಕ ಪ್ಯಾಕೇಜನ್ನು ಕೇಂದ್ರ ಮತ್ತು ರಾಜ್ಯಸರಕಾರಗಳು ಭರಿಸಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಡುವದಾಗಿ ನಾಚಪ್ಪ ತಿಳಿಸಿದರು.
ಕೊಡಗಿನ ಏಳು ನಾಡು ಗಳಲ್ಲುಂಟಾದ ಪ್ರಾಕೃತಿಕ ವಿಕೋಪದ ಸಂತ್ರಸ್ತ ನಿರಾಶ್ರಿತರ ಶಾಶ್ವತ ಪುನರ್ವಸತಿಗಾಗಿ ವಿಶೇಷÀ ವಿಪತ್ತು ನಿರ್ವಹಣಾ ಮಂತ್ರಾಲಯವನ್ನು ಸ್ಥಾಪಿಸಿ ಮಂತ್ರಿಯೊಬ್ಬರನ್ನು ನೇಮಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವದು ಎಂದರು.
ಅತಿವೃಷ್ಟಿಯಿಂದ ಸಮಗ್ರ ಕೊಡಗು ಸಂಕಷ್ಟಕ್ಕೆ ಸಿಲುಕಿದೆ, ಕೊಡಗು ಅಕ್ಷರಶಃ ಕೊಚ್ಚಿ ಹೋಗಿದೆಯೆಂದು ಕೆಲವು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದು, ಇದನ್ನು ಬಳಸಿಕೊಂಡ ಕೆಲವು ಬಹುದೊಡ್ಡ ಮಾಫಿಯ ಜಾಲ ಜನರನ್ನು ವಂಚಿಸಿದೆ. ನೈಜ ದುರಂತವನ್ನು ಮರೆಮಾಚಿ ಸಂತ್ರಸ್ತರಿಗೆ ಪರಿಹಾರ ತಲುಪದಂತೆ ಮಾಡಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗ ಬೇಕೆಂದು ಎನ್.ಯು.ನಾಚಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಕೆಲವು ಪರಿಹಾರ ಕೇಂದ್ರಗಳಲ್ಲಿ ವಲಸಿಗರು ಹಾಗೂ ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿದ್ದು, ಅತಿವೃಷ್ಟಿ ಹಾನಿ ನೆಪದಲ್ಲಿ ನೈಜ ಸಂತ್ರಸ್ತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ವಂಚನೆಯ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಚೆಂಬಂಡ ಜನತ್ ಮತ್ತು ಕೂಪದೀರ ಸಾಬು ಉಪಸ್ಥಿತರಿದ್ದರು.