ಕುಶಾಲನಗರ, ಸೆ. 19: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐವರನ್ನು ಕುಶಾಲನಗರ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಪೃಥ್ವಿ ಎಂಬವರ ಮೇಲೆ ತಾ. 16 ರಂದು ಬೆಳಿಗ್ಗೆ ದಂಡಿನಪೇಟೆ ನಿವಾಸಿ ಆಸಿಫ್ ಮತ್ತು ಇತರರು ಹಲ್ಲೆಗೆ ಯತ್ನಿಸಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜ್ವರಕ್ಕೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾವಿಸಿದ್ದ ಆಸಿಫ್ ಕರ್ತವ್ಯ ನಿರತ ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆತನ ಸಂಗಡಿಗರು ವೈದ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ. ಘಟನೆ ಸಂಬಂಧ ಡಾ. ಪೃಥ್ವಿ ಅವರ ದೂರಿನ ಮೇರೆಗೆ ಆಸಿಫ್ ಮತ್ತು ಸಂಗಡಿಗರಾದ ಗುಮ್ಮನಕೊಲ್ಲಿ ನಿವಾಸಿಗಳಾದ ಆರಿಫ್, ಫಯಾಜ್, ರಮೀಲ, ಶಬನಾ ಎಂಬವರ ವಿರುದ್ಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.