ಸೋಮವಾರಪೇಟೆ, ಸೆ. 19: ಕಳೆದ ಆ. 16 ರಂದು ಉಂಟಾದ ಭೂಕುಸಿತಕ್ಕೆ ಸಿಲುಕಿ ಮಣ್ಣಿನಡಿ ನಾಮಾವಶೇಷ ಗೊಂಡಿರುವ ಮನೆಗಾಗಿ ಇದೀಗ ಹಿಟಾಚಿ ಯಂತ್ರಗಳ ಮೂಲಕ ಹುಡುಕಾಟ ಆರಂಭವಾಗಿದೆ.
ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ಮಾಜಿ ಸೈನಿಕ ಜಗ್ಗಾರಂಡ ದೇವಯ್ಯ ಅವರಿಗೆ ಸೇರಿದ 2 ಅಂತಸ್ತಿನ ಮನೆ ಸಂಪೂರ್ಣ ಕಣ್ಮರೆಯಾಗಿದ್ದು, ಮನೆಯಿಂದ ಒಂದು ಗುಂಡು ಸೂಜಿಯನ್ನೂ ಹೊರತೆಗೆಯಲು ಅವಕಾಶ ಸಿಕ್ಕಿರಲಿಲ್ಲ. ಉಟ್ಟ ಬಟ್ಟೆಯಲ್ಲೇ ಹೊರಬಂದ ದೇವಯ್ಯ ಕುಟುಂಬ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಇದೀಗ ಸಂಬಂಧಿಕರ ಮನೆಗೆ ತಲಪಿದ್ದಾರೆ.
ಪ್ರಕೃತಿಯ ಕೋಪಕ್ಕೆ ದೇವಯ್ಯ ಅವರ 10 ಎಕರೆ ತೋಟ, ಗದ್ದೆ ಸೇರಿದಂತೆ ಮನೆ ಸಂಪೂರ್ಣ ನಾಶವಾಗಿದ್ದು, ಈ ವ್ಯಾಪ್ತಿಯಲ್ಲಿ 20 ಎಕರೆಗೂ ಅಧಿಕ ಭೂಕುಸಿತ ಉಂಟಾಗಿದೆ.
ಇದೀಗ ಸುತ್ತಮುತ್ತಲ ಪ್ರದೇಶ ಮರುಭೂಮಿಯಂತಾಗಿದ್ದು, ತಮಗೆ ಸೇರಿದ ವಸ್ತುಗಳೇನಾದರೂ ಸಿಗಬಹುದೇ ಎಂಬ ಆಶಾಭಾವನೆಯಿಂದ ಮನೆಯಿದ್ದ ಜಾಗದಲ್ಲಿ ಹಿಟಾಚಿ ಯಂತ್ರದ ಮೂಲಕ ಹುಡುಕಾಟ ಶುರುವಾಗಿದೆ.