ಸುಂಟಿಕೊಪ್ಪ, ಸೆ. 19: ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ಶಾಲೆಯ ಇಕೋ ಕ್ಲಬ್ ಹಾಗೂ ವಿಜ್ಞಾನ ಸಂಘದ ವತಿಯಿಂದ ಶನಿವಾರ (ಸೆ.15 ರಂದು) ‘ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸ್ವಚ್ಛತಾ ಕಾರ್ಯಕ್ಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಶಾಲಾ ವಿದ್ಯಾರ್ಥಿಗಳು, ನಮ್ಮ ಮನೆ, ಶಾಲೆ, ಸಮುದಾಯ ಹಾಗೂ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವದಾಗಿ ಸಂಕಲ್ಪ ಮಾಡಿದರು. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಪರಿಸರ ಸ್ವಚ್ಛತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಜ್ಞಾನ ಸಂಘದ ಶಿಕ್ಷಕಿ ಎಂ.ಎನ್. ಲತಾ, ಶಿಕ್ಷಕರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕೈಗೊಂಡರು. ಸ್ವಚ್ಛತೆ ಕುರಿತು ಘೋಷಣೆಗಳನ್ನು ಪ್ರದರ್ಶಿಸಿದರು.
ಸರ್ ಎಂ.ವಿ. ದಿನಾಚರಣೆ: ಶಾಲೆಯಲ್ಲಿ ಇದಕ್ಕೂ ಮುನ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಆಚರಿಸಲಾಯಿತು. ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆ ಕುರಿತು ತಿಳಿಸಿದರು.