ಕೂಡಿಗೆ, ಸೆ. 19: ಮಹಾಮಳೆಯ ಜಲ ಪ್ರವಾಹದಿಂದಾಗಿ ಹಾರಂಗಿ ಮತ್ತು ಕಾವೇರಿ ನದಿ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ನೀರು ನುಗ್ಗಿ ನಷ್ಟಕ್ಕೊಳಗಾದವರಿಗೆ ಮನೆ ಶುದ್ಧೀಕರಣಕ್ಕೆಂದು ಕಂದಾಯ ಇಲಾಖೆಯ ವತಿಯಿಂದ ಒಂದು ಮನೆಗೆ ತಾತ್ಕಾಲಿಕವಾಗಿ 3800 ರೂ. ಗಳ ಚೆಕ್ ಅನ್ನು ವಿತರಣೆ ಮಾಡಲಾಯಿತು.
ಕೂಡುಮಂಗಳೂರು ಮತ್ತು ಬಸವನತ್ತೂರು ಗ್ರಾಮಗಳಲ್ಲಿ ನೆರೆಯಿಂದ ಹಾನಿಗೊಳಗಾದವರ ಪಟ್ಟಿಯಲ್ಲಿ ಸೇರದೆ ಇರುವ ನಷ್ಟಕ್ಕೊಳಗಾದವರನ್ನು ಗುರುತಿಸಿ ಮನೆಗಳಿಗೆ ಕಂದಾಯ ಇಲಾಖೆಯಿಂದ ಚೆಕ್ ವಿತರಣೆ ಮಾಡಲಾಯಿತು. ಚೆಕ್ ಅನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೇಷಾ ವಿತರಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಮಂಜುನಾಥ್, ಸುರೇಶ್, ರಮೇಶ್, ಗ್ರಾಮಲೆಕ್ಕಿಗ ಸಚಿನ್ ಇದ್ದರು.