ಮಡಿಕೇರಿ, ಸೆ. 19: ನಮ್ಮಲ್ಲಿ ಜಾತಿ, ಮತ, ಭೇದಗಳಿರಬಾರದು, ನಾವೇಲ್ಲರೂ ಒಂದೇ ಎಂಬ ಭಾವನೆಯಿಂದ ಕಷ್ಟ-ದುಃಖಗಳಿಗೆ ಸ್ಪಂದಿಸಬೇಕೆಂದು ಕ್ರೈಸ್ತ ಧರ್ಮದ ರಾಜ್ಯ ಮಹಾಧರ್ಮಾಧ್ಯಕ್ಷ ಪೀಟರ್ ಮಚ್ಚಾಡೋ ಹೇಳಿದರು.

ನಗರದ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮಲ್ಲಿ ಐಕ್ಯತೆ ಮತ್ತು ಒಗ್ಗಟ್ಟು ಮುಖ್ಯ, ನಷ್ಟಕ್ಕೊಳಗಾದವರ ಕಷ್ಟ - ದುಃಖಗಳಿಗೆ ಸ್ಪಂದಿಸುವದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ನೈಸರ್ಗಿಕದ ವೈಪರೀತ್ಯ ದಿಂದಾಗಿ ಜಲಪ್ರಳಯ ಸಂಭವಿಸಿದೆ. ಇದೆಲ್ಲವೂ ಭಗವಂತನ ಲೀಲೆಯಾಗಿದೆ. ಕಷ್ಟ ಕಾರ್ಪಣ್ಯ ಹಾಗೂ ಸಂಕಷ್ಟಗಳೊಂದಿಗೆ ನಾವೂ ಕೂಡ ಪಾಲುದಾರರಾಗಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಸೇರಿಕೊಂಡು ಪರಸ್ಪರ ಸಹಾಯ ಹಸ್ತ ನೀಡಲು ಧರ್ಮಗುರುಗಳು, ಕನ್ಯಾಸ್ತ್ರಿಗಳು ಜಿಲ್ಲೆಗೆ ಆಗಮಿಸಿರುವದಾಗಿ ಹೇಳಿದರು.

ಮೈಸೂರಿನ ಧರ್ಮಗುರು ರಾಯಪ್ಪ ಸಿ. ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಮೊದಲ ದಿನವೇ ನಾವೆಲ್ಲರೂ ಸೇರಿ ಸಹಾಯ ಹಸ್ತ ನೀಡಲು ಕೈಜೋಡಿಸಲು ನಿರ್ಧಾರ ಕೈಗೊಂಡು ಸರಕಾg Àದೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದು, ಕಷ್ಟದಲ್ಲಿರುವ ಮತ್ತು ನೋವಿನಿಂದಿರುವ ನಿಮ್ಮ ಜೊತೆ ಇರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರು ಆಲ್ಫೆಡ್ ಮೆಂಡೋನ್ಸಾ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು.

ಇದೇ ಸಂದರ್ಭ ಪೀಟರ್ ಮಚ್ಚಾಡೋ ಧರ್ಮಗುರುಗಳು ಸಾಂಕೇತಿಕವಾಗಿ ಸಂತ್ರಸ್ತರಿಗೆ ವಸ್ತುಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಮೈಸೂರಿನ ಗುರುಗಳಾದ ಲೆಸ್ಲಿ ಮೊರಾಸ್, ಪ್ಯಾಟ್ರಿಕ್ ಪಿಂಟೋ, ವಿನ್ಸೆಂಟ್ ಮೊಂತೇರೋ, ಜೇಮ್ಸ್ ಡೆಂಮಿನಿಕ್, ಮುದಲೈ ಮುತ್ತು, ಬೆಂಗಳೂರಿನ ಸಿಸ್ಟರ್ ಅಶ್ವಿನಿ ಮತ್ತು ಒಡಿಪಿ ನಿರ್ದೇಶಕರುಗಳಾದ ಫಾ| ಸ್ಟಾನಿ ಡಿ ಆಲ್ಮೆಡ, ಒಡಿಪಿ ಸಂಯೋಜಕಿ ಮೋಲಿ, ಜಿಲ್ಲಾ ಒಡಿಪಿ ಸಂಯೋಜಕಿ ಜಾಯ್ಸ್ ಮೆನೇಜಸ್, ಲೀನಾ ಮತ್ತು ವಿಜಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.