ಸೋಮವಾರಪೇಟೆ, ಸೆ.19: ಕೊಡಗು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಕಾವಲು ಪಡೆಯ ಪದಾಧಿಕಾÀರಿಗಳು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರು ಕೆಲಸ ಇಲ್ಲದೆ ಪರಿತಪಿಸುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲವನ್ನು ಪಡೆದುಕೊಂಡವರು ಕಟ್ಟಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಲವಂತವಾಗಿ ಸಾಲ ವಸೂಲಿ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದರೂ ಅದನ್ನು ಪಾಲಿಸುತ್ತಿಲ್ಲ. ಸಂಸ್ಥೆಯವರು ಹಣ ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಆರೋಪಿಸಿದರು.
ಇದೇ ಕಾರಣಕ್ಕೆ ಮಂಗಳವಾರ ಕುಶಾಲನಗರ ಹೋಬಳಿಯ ಮುಳ್ಳುಸೋಗೆಯಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಬಲವಂತವಾಗಿ ಹಣ ವಸೂಲಿ ಮಾಡದಂತೆ ಕಟ್ಟು ನಿಟ್ಟಿನ ಆದೇಶ ನೀಡಬೇಕು. ಮುಂದಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷ ಕೆ.ಆರ್.ಮಂಜುನಾಥ, ಪದಾಧಿಕಾರಿ ಗಳಾದ ಕುಮಾರ, ಪ್ರವೀಣ್, ಎಸ್.ಬಿ.ರಾಜೀವ್ ಉಪಸ್ಥಿತರಿದ್ದರು.