ಮಡಿಕೇರಿ, ಸೆ. 18: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ನಲುಗಿ ಸಹಸ್ರಾರು ಮಂದಿ ಸಂತ್ರಸ್ತರಾಗಿ ದ್ದಾರೆ. ಜನ - ಜಾನುವಾರುಗಳ ಜೀವ ಹೋಗಿದೆ. ಅದೆಷ್ಟೋ ಮಂದಿಯ ಮನೆಗಳು ನೆಲಸಮವಾಗಿವೆ, ಇನ್ನೆಷ್ಟೋ ಮಂದಿ ತೋಟ, ಕೃಷಿ ಗದ್ದೆಗಳನ್ನು ಕಳೆದು ಕೊಂಡಿದ್ದಾರೆ, ನೊಂದು, ಬೆಂದು ಸಂಕಷ್ಟದಲ್ಲಿರುವವರ ನೆರವಿಗೆ ಸರಕಾರ, ಜನಪ್ರತಿನಿಧಿಗಳು, ಸಂಘ - ಸಂಸ್ಥೆಗಳು ಮನ ಮಿಡಿದಿವೆ, ಆದರೆ ನೈಜ ಸಂತ್ರಸ್ತರ ಪಾಲಿಗೆ ಯಾವದೂ ದಕ್ಕುತ್ತಿಲ್ಲ ಎಂಬ ನೋವು, ಕೊರಗು ಎಲ್ಲರಲ್ಲೂ ಇದೆ. ಇದಕ್ಕೆ ನಿದರ್ಶನವೆಂಬಂತೆ ಯಾವದೇ ಹಾನಿ ಸಂಭವಿಸದ ವ್ಯಕ್ತಿಯೋರ್ವರ ಹೆಸರಿಗೆ ಸರಕಾರದ ಪರಿಹಾರದ ಚೆಕ್ ಬಂದಿರುವದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದ್ದಲ್ಲದೆ, ಆಕ್ರೋಶಕ್ಕೂ ತುತ್ತಾಗಿ ಪಂಚಾಯಿತಿ ಎದುರು ಪ್ರತಿಭಟಿಸಿದ ಪ್ರಸಂಗ ಕೂಡ ಇಂದು ಎದುರಾಗಿದೆ.
ಪ್ರಕೃತಿ ವಿಕೋಪಕ್ಕೆ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ. ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಎಲ್ಲೆಲ್ಲೋ ದಿಕ್ಕಾಪಾಲಾಗಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಗೆ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಆದರೆ ಅದು ನೈಜ ಸಂತ್ರಸ್ತರನ್ನು ತಲಪಲಿಲ್ಲ, ಸರಕಾರದ ಪರಿಹಾರವಾದರೂ ಸಿಗಬಹುದೆಂಬ ಆಶಾಭಾವನೆ ಯಲ್ಲಿರುವವರಿಗೆ ಇದೀಗ ಅದೂ ಕೂಡ ಧಕ್ಕುವದಿಲ್ಲವೆಂಬ ನಿರಾಸೆ ಕಾಡಲಾರಂಭಿಸಿದೆ. ಸರಕಾರ ನೆರವಿನ ಹಸ್ತ ಚಾಚಿದ್ದರೂ ಅಧಿಕಾರಿಗಳ ಧೋರಣೆಯಿಂದ ಗೊಂದಲ ಸೃಷ್ಟಿಯಾಗುತ್ತಿದೆ.
ಉಳ್ಳವರಿಗೆ ಚೆಕ್
ಮಕ್ಕಂದೂರುವಿನಲ್ಲಿ ರಸ್ತೆ ಬದಿ ಬೀರಾನ್ ಕುಟ್ಟಿ ಎಂಬವರಿಗೆ ಸೇರಿದ ಮನೆಯಿದೆ. 50-60 ವರ್ಷಗಳ ಹಿಂದಿನ ಮನೆಯಾಗಿದ್ದು, ಬೀರಾನ್ ಸಂಸಾರ ಮನೆ ತೊರೆದು ಇಂಜಿನಿಯರ್ ಆಗಿರುವ ತಮ್ಮ ಪುತ್ರನ ಮನೆಯಲ್ಲಿ ನೆಲೆಸಿದ್ದಾರೆ. ಆದರೆ ಯಾವದೇ ಹಾನಿಯಾಗ ದಿದ್ದರೂ ಅವರ ಹೆಸರಿಗೆ ಕಂದಾಯ ಇಲಾಖೆಯಿಂದ ರೂ. 65 ಸಾವಿರ ಮೊತ್ತದ ಚೆಕ್ ಪಂಚಾಯಿತಿಗೆ ಬಂದಿದೆ. ಈ ವಿಷಯ ಅರಿತ ಗ್ರಾಮಸ್ಥರು ಇಂದು ಪಂಚಾಯಿತಿ ಎದುರು ಜಮಾಯಿಸಿ ಪ್ರತಿಭಟನೆಗಿಳಿದರು. ಎಲ್ಲವನ್ನೂ ಕಳೆದುಕೊಂಡಿರುವವರನ್ನು ಕೈ ಬಿಟ್ಟು ಏನೂ ಆಗದಿರುವವರಿಗೆ ಚೆಕ್ ಬಂದಿರುವ ಬಗ್ಗೆ ಪ್ರಶ್ನಿಸಿದರಲ್ಲದೆ, ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು.
ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಲ್ಲಿ ಪ್ರಶ್ನಿಸಿದ ಸಂದರ್ಭ ಪಂಚಾಯಿತಿಯಿಂದ ಅರ್ಜಿ ಸ್ವೀಕರಿಸಿ ಕಂದಾಯ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಕಂದಾಯಾಧಿಕಾರಿಗಳು, ಇಂಜಿನಿಯರ್‍ಗಳು ಪರಿಶೀಲನೆ ಮಾಡಿ ಪಟ್ಟಿ ಮಾಡುತ್ತಾರೆ. ಬೀರಾನ್ ಕುಟ್ಟಿಯವರಿಗೆ ಚೆಕ್ ಬಂದಿದೆ. ಆಕ್ರೋಶ ಬಂದ ಹಿನ್ನೆಲೆಯಲ್ಲಿ ಅದನ್ನು ತಡೆ ಹಿಡಿಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಕಂದಾಯಾಧಿಕಾರಿ ಪ್ರತಿಕ್ರಿಯಿಸಿ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳಾಗುತ್ತವೆ. ಇದೀಗ ಬಂದಿರುವ ಚೆಕ್ ಅನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು.
ಗ್ರಾಮಸ್ಥರ ಪ್ರಕಾರ ಪರಿಶೀಲನೆ ಮಾಡಿದ ಅಭಿಯಂತರ ಹಾಗೂ ಬೀರಾನ್ ಅವರ ಪುತ್ರ ವಂಚಿತ ರಾಗಿದ್ದು, ಆ ಮೂಲಕ ಪರಿಹಾರದ ಚೆಕ್ ಬಂದಿರುವದಾಗಿ ಆರೋಪಿಸಿದರು. ಸಂತ್ರಸ್ತರ ಹಣವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳದೆ ಮರು ಪರಿಶೀಲನೆ ಮಾಡಿ ನೈಜ ಸಂತ್ರಸ್ತರಿಗೆ ನೆರವಾಗುವಂತೆ ಆಗ್ರಹಿಸಿರುವ ಗ್ರಾಮಸ್ಥರು ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವದಾಗಿ ಎಚ್ಚರಿಸಿದ್ದಾರೆ.