(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಸೆ. 18: ಕ್ರೀಡಾ ಪರಂಪರೆಯಲ್ಲಿ ಭಾರತ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿರುವ ಕ್ರೀಡಾ ಜಿಲ್ಲೆ ಎಂಬ ಖ್ಯಾತಿಯ ಪುಟ್ಟ ಕೊಡಗು ಜಿಲ್ಲೆ ಕ್ರೀಡೆಯಲ್ಲಿ ಮತ್ತೊಮ್ಮೆ ತನ್ನ ವಿಶಿಷ್ಟತೆಯನ್ನು ಮೆರೆದಿದೆ. ಪ್ರಸಕ್ತ ಸಾಲಿನಲ್ಲಿ ಒಂದು ಅರ್ಜುನ ಪ್ರಶಸ್ತಿ ಹಾಗೂ ಚೊಚ್ಚಲ ಬಾರಿಗೆ ದ್ರೋಣಾಚಾರ್ಯ ಪ್ರಶಸ್ತಿ ಮೂಲಕ ಕೊಡಗು ಹೆಸರು ಮಾಡುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಹಲವಷ್ಟು ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ಕೊಡಗಿಗೆ ಕೀರ್ತಿತರುತ್ತಿರುವದು ಇಲ್ಲಿನ ಕ್ರೀಡಾಪ್ರೇಮಿಗಳಿಗೆ ಹರುಷ ತರುತ್ತಿದೆ. ಇತ್ತೀಚೆಗಷ್ಟೆ ಇಂಡೋನೇಷಿಯಾದ ಜಕಾರ್ತದಲ್ಲಿ ಮುಕ್ತಾಯಗೊಂಡ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ವನ್ನು ಕೊಡಗು ಹಾಗೂ ಕೊಡಗು ಮೂಲದ ಏಳು ಮಂದಿ ಕ್ರೀಡಾ ತಾರೆಯರು ಪ್ರತಿನಿಧಿಸಿದ್ದರು. ಈ ಏಳು ಮಂದಿಯ ಪೈಕಿ ಭಾರತ ಈ ಬಾರಿ ಗಳಿಸಿರುವ ದಾಖಲೆಯ 69 ಪದಕಗಳ ಪೈಕಿ ಒಟ್ಟು ಆರು ಪದಕಗಳಿಗೆ ಭಾಜನರಾಗಿದ್ದರು. ಈ ಏಳು ಮಂದಿಯ ಪೈಕಿ ಹೊಸ ತೊಂದು ಕ್ರೀಡೆಯಲ್ಲೂ ನೂತನ ಕ್ರೀಡಾಳುವೊಬ್ಬರು ಸಾಧನೆ ತೋರಿ ಈ ಕ್ರೀಡೆಯಲ್ಲಿ ಚೊಚ್ಚಲ ಪದಕದ ಮೂಲಕ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದ ವಿಶೇಷತೆಯೂ ಇತ್ತು.
ಜಿಲ್ಲೆ ಹಾಕಿಗೆ ಹೆಚ್ಚು ಹೆಸರುವಾಸಿಯಾಗಿದೆ ಹಾಕಿಯೊಂದಿಗೆ ಇತರ ಕ್ರೀಡೆಗಳಿಂದಲೂ ಜಿಲ್ಲೆಯ ಕ್ರೀಡಾಪಟುಗಳು ಹೊರತಾಗಿಲ್ಲ ಎಂಬದು ಕ್ರೀಡಾಜಿಲ್ಲೆ ಖ್ಯಾತಿಗೆ ಸರಿ ಎನಿಸುತ್ತದೆ. ಹಾಕಿ, ಕ್ರಿಕೆಟ್, ಬಾಕ್ಸಿಂಗ್, ಬಾಸ್ಕೆಟ್‍ಬಾಲ್, ರಗ್ಬಿ, ಟೆನ್ನಿಸ್, ಬ್ಯಾಡ್‍ಮಿಂಟನ್, ಸ್ಕ್ವಾಷ್, ಗಾಲ್ಫ್, ಈಕ್ವೆಸ್ಟೇರಿಯನ್, ಅಥ್ಲೆಟಿಕ್ಸ್, ಥ್ರೋಬಾಲ್, ಸೈಲಿಂಗ್ ಸೇರಿದಂತೆ ಬಹುತೇಕ ಮಾನ್ಯತೆ ಪಡೆದಿರುವ ಕ್ರೀಡೆÀಗಳೆಲ್ಲದರಲ್ಲೂ ಕೊಡಗಿನವರು ದೇಶವನ್ನು ಅಂತರ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಇವರ ಸ್ಪರ್ಧೆ ಕೇವಲ ಪಾಲ್ಗೊಳ್ಳುವಿಕೆಗೆ ಮಾತ್ರವಲ್ಲ ದೇಶಕ್ಕೆ ಪ್ರಶಸ್ತಿಗಳನ್ನೂ ಬಹುತೇಕರು ತಂದಿರುವದು ಕೊಡಗಿನ ಕ್ರೀಡಾ ಪರಂಪರೆಗೆ ಸಾಕ್ಷಿ. ಮಾತ್ರವಲ್ಲದೆ ಮತ್ತಷ್ಟು ಯುವ ಪ್ರತಿಭೆಗಳೂ ದೇಶವನ್ನು ಪ್ರತಿನಿಧಿಸಿಕೊಂಡು ಮುಂದೆ ಬರುತ್ತಿರುವದು ಹಿರಿಮೆಯಾಗಿದೆ.
ಬಿರುದು - ಸನ್ಮಾನಗಳು
ಇಂತಹ ಕ್ರೀಡಾ ಸಾಧಕರಿಗೆ ಭಾರತದಲ್ಲಿ ಕ್ರೀಡಾ ಸಾಧನೆಗಾಗಿ ಕೊಡಲ್ಪಡುವ ಉನ್ನತಮಟ್ಟದ ಬಿರುದುಗಳು-ಸನ್ಮಾನಗಳೂ ಸಿಗುತ್ತಿರುವದು ಕೂಡ ಸಂತಸದಾಯಕವಾಗಿದೆ. ಇದನ್ನು ಸಾಕ್ಷೀಕರಿಸು ವಂತೆ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ಒಬ್ಬರು ಆಯ್ಕೆಗೊಂಡಿದ್ದರೆ, ಇದರೊಂದಿಗೆ ಇದೇ ಪ್ರಪ್ರಥಮ ಬಾರಿಗೆ ಕ್ರೀಡಾ ತರಬೇತುದಾರರೊಬ್ಬರು ಇದಕ್ಕಾಗಿ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಯ ಪಟ್ಟಿಯಲ್ಲಿ ಶಿಫಾರಸ್ಸುಗೊಂಡು ಕೀರ್ತಿ ತಂದಿದ್ದಾರೆ. ಈ ತನಕ 11 ಮಂದಿ ಅರ್ಜುನ ಪ್ರಶಸ್ತಿ ಪಡೆದಿದ್ದು, ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ದೇಶದ ಟೆನ್ನಿಸ್‍ತಾರೆ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿರುವ ಮಾದಾಪುರದವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಶಿಫಾರಸುಗೊಂಡಿದ್ದಾರೆ.
ಕ್ರೀಡಾ ತರಬೇತುದಾರರಿಗೆ ನೀಡುವ ಉನ್ನತ ಪ್ರಶಸ್ತಿಯಾದ ದ್ರೋಣಾಚಾರ್ಯ ಬಿರುದಿಗೆ ಇದೇ ಪ್ರಥಮ ಬಾರಿಗೆ ಕೊಡಗಿನ ತರಬೇತುದಾರರೊಬ್ಬರ ಹೆಸರು ಶಿಫಾರಸುಗೊಂಡಿದೆ. ಕಳೆದ ಹಲವು ವರ್ಷಗಳಿಂದ ಬಾಕ್ಸಿಂಗ್ ಕ್ರೀಡೆಯಲ್ಲಿ ಕ್ರೀಡಾಪಟು ಗಳಿಗೆ ತರಬೇತಿ ನೀಡುತ್ತಿರುವ ಮೂಲತಃ ನಾಪೋಕ್ಲು ಕೊಕೇರಿಯವರಾದ ಚೇನಂಡ ಎ. ಕುಟ್ಟಪ್ಪ ಅವರು ದ್ರೋಣಾಚಾರ್ಯ ಪ್ರಶಸ್ತಿಯ ಪಟ್ಟಿಯಲ್ಲಿದ್ದಾರೆ.
ಭಾರತ ಕ್ರೀಡಾ ಸಚಿವಾಲಯದಿಂದ ಆಯ್ಕೆ ಸಮಿತಿ ನೀಡಿರುವ ಸಾಧಕರ ಹೆಸರು ಬಹುತೇಕ ಅಧಿಕೃತಗೊಂಡಿದ್ದು, ಇದೇ ಸೆಪ್ಟೆಂಬರ್ 25 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಅರ್ಜುನ ಪ್ರಶಸ್ತಿಗೆ ದೇಶದ 20 ಕ್ರೀಡಾಪಟುಗಳು ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಒಟ್ಟು ಐದು ಮಂದಿಯ ಹೆಸರು ಶಿಫಾರಸುಗೊಂಡಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೆಯ್ಟ್‍ಲಿಫ್ಟರ್ ಮೀರಾಬಾಯಿ ಜಾನು ಈ ಬಾರಿಯ ಪ್ರತಿಷ್ಠಿತ ರಾಜೀವ್‍ಗಾಂದಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ಕೊಡಗಿಗೆ 12ನೇ ಅರ್ಜುನ ಪ್ರಶಸ್ತಿ
ಈ ತನಕ ಕೊಡಗು ಜಿಲ್ಲೆ ಹಾಗೂ ಕೊಡಗಿನ ಮೂಲದವರಾದ 11 ಮಂದಿ ಕ್ರೀಡಾ ಸಾಧಕರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದು, ರೋಹನ್ ಈ ಸಾಲಿಗೆ ಮತ್ತೊಬ್ಬರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಸರಕಾರದಿಂದ ಕ್ರೀಡಾ ಸಾಧನೆಗಾಗಿ ನೀಡುವ ಏಕಲವ್ಯ ಪ್ರಶಸ್ತಿಯನ್ನು ಕೂಡ ಜಿಲ್ಲೆಯ ಹಲವಷ್ಟು ಮಂದಿ ಪಡೆದುಕೊಂಡಿದ್ದು, ದೇಶದ ಮಟ್ಟದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿರುವದು ಇದು ಪ್ರಥಮ. ಜಿಲ್ಲೆಯ ಮಟ್ಟಿಗೆ ಎಲೆಮರೆಯಕಾಯಿಯಂತಿದ್ದ ಚೇನಂಡ ಕುಟ್ಟಪ್ಪ (ವಿಶು) ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದು, ಕೊಕೇರಿಯ ಚೇನಂಡ ದಿ. ಅಚ್ಚಯ್ಯ ಹಾಗೂ ಶಾಂತಿ ದಂಪತಿಯ ಪುತ್ರ. ಸ್ವತಃ ಬಾಕ್ಸಿಂಗ್‍ಪಟು ಆಗಿರುವದಲ್ಲದೆ, 2009ರಿಂದ ತರಬೇತುದಾರರಾಗಿ ಮಾಡಿರುವ ಸಾಧನೆಗೆ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.