ವೀರಾಜಪೇಟೆ, ಸೆ. 18: ರಾಜ್ಯದ ಸಫಾಯಿ ಕರ್ಮಾಚಾರಿ ಆಯೋಗದ ನಿರ್ದೇಶನದಂತೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹೊರ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯಿತಿಯಲ್ಲಿ ತಾ. 19 ರಿಂದ ಕೆಲಸ ಮುಂದುವರೆಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಗೆ ಪಟ್ಟಣ ಪಂಚಾಯಿತಿ ಮುಂದೆ ಎರಡು ದಿನಗಳಿಂದ ಹೂಡಿದ್ದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.

ಕಳೆದ ಡಿಸೆಂಬರ್ ತಿಂಗಳ 4 ರಂದು ಆದೇಶ ಹೊರಡಿಸಿ ಜನಸಂಖ್ಯೆ ಆಧಾರದ ಮೇಲೆ 700 ಮಂದಿಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನೇಮಕ ಮಾಡಿ ಉಳಿದವರನ್ನು ಕೆಲಸ ದಿಂದ ಮುಂದುವರೆಸದಂತೆ ಆದೇಶ ನೀಡಿದ್ದರ ವಿರುದ್ಧ ವೀರಾಜಪೇಟೆ ಪೌರ ಕಾರ್ಮಿಕರ ಸಂಘಟನೆ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿಯ ವಿಚಾರಣೆ ನಡೆಸಿದ ಸಫಾಯಿ ಕರ್ಮಾಚಾರಿ ಆಯೋಗ ತಾ. 6.4.2018 ರಂದು ಸರಕಾರದ ಮುಂದಿನ ಆದೇಶದವರೆಗೆ ಹೊರಗುತ್ತಿಗೆಯ ಪೌರ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಬಹುದು ಎಂದು ಆದೇಶ ನೀಡಿದನ್ನು ಸರಕಾರದ ಸಮ್ಮತಿಯ ಮೇರೆ ಪಟ್ಟಣ ಪಂಚಾಯಿತಿ ಪುರಸ್ಕರಿಸಿದ್ದು ಇಂದು ಸಂಜೆ ಇಲ್ಲಿನ ಪೌರ ಕಾರ್ಮಿಕರ ಅಧ್ಯಕ್ಷ ನವೀನ್ ಕುಮಾರ್ ಅವರಿಗೆ ನಾಳೆಯಿಂದ ಎಲ್ಲರೂ ಕೆಲಸಕ್ಕೆ ಹಾಜರಾಗುವಂತೆ ಲಿಖಿತ ಪತ್ರ ನೀಡಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್ ಕುಮಾರ್ ಅವರು ಇಂದು ಕೆಲಸಕ್ಕೆ ಹಾಜರಾಗುವಂತೆ ಲಿಖಿತ ಪತ್ರ ನೀಡಿದ್ದರಿಂದ ಹೊರಗುತ್ತಿಗೆಯ 21 ಮಂದಿ ಹಾಗೂ ದಿನಗೂಲಿ ನೌಕರರ 12 ಮಂದಿ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಸಂಘಟನೆಯ ನವೀನ್ ಕುಮಾರ್ ‘ಶಕ್ತಿ’ಗೆ ತಿಳಿಸಿದ್ದು ಇದರಿಂದ ಪೌರ ಕಾರ್ಮಿಕರ ನಡುವೆ ಇದ್ದ ಕೆಲಸದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಸಚಿವರ ಬಳಿಗೆ ನಿಯೋಗ: ದಿನಗೂಲಿ ಹಾಗೂ ಹೊರಗುತ್ತಿಗೆ ಆಧಾರದ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಪೌರ ಕಾರ್ಮಿಕರ ಸಂಘಟನೆಯ ಪ್ರಮುಖರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪೌರಾಡಳಿತ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸ್ಥಳದಲ್ಲಿಯೇ ಖಾಯಂಗೊಳಿಸಲು ಆದೇಶ ಹೊರಡಿಸಲಾಗುವದು ಎಂದು ಜನತಾ ದಳದ ಮುಖಂಡ ಎಸ್.ಎಚ್. ಮೊೈನುದ್ದೀನ್ ತಿಳಿಸಿದ್ದು, ಕಾರ್ಮಿಕರ ಸಂಘಟನೆಗೂ ಭರವಸೆ ನೀಡಿದ್ದಾರೆ.

ಪೌರಕಾರ್ಮಿಕರ ಕೆಲಸದ ಆದೇಶದ ಗೊಂದಲದಲ್ಲಿ ಯಾವದೇ ರಾಜಕೀಯ ಬೆರೆಸಬಾರದು. ನ್ಯಾಯ ಸಮ್ಮತವಾಗಿ ರಾಜಕೀಯ ರಹಿತವಾಗಿ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸುವದು ಎಲ್ಲ ಪ್ರತಿನಿಧಿಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಪೌರ ಕಾರ್ಮಿಕರ ಬೇಡಿಕೆಗಳನ್ನು ಸಲ್ಲಿಸಿ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಪೌರಾಡಳಿತ ಸಚಿವರಿಂದ ಆದೇಶ ಹೊರಡಿಸಲಾಗುವದು. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ಈಚೆಗೆ ಮಡಿಕೇರಿಗೆ ಭೇಟಿ ನೀಡಿದಾಗ ಅವರನ್ನು ಭೇಟಿ ಮಾಡಿ ಕಾರ್ಮಿಕರ ಸಮಸ್ಯೆಗಳ ಕುರಿತು ಮನವರಿಕೆ ಮಾಡಿ ಕೊಡಲಾಗಿದ್ದು ಕಾರ್ಮಿಕರ ಪರವಾದ ಹೊಸ ಆದೇಶಕ್ಕೂ ಅವರು ಸಮ್ಮತಿ ನೀಡಿದ್ದಾರೆ ಎಂದು ಎಸ್.ಎಚ್. ಮತೀನ್ ತಿಳಿಸಿದ್ದಾರೆ.